ಜೀವನದೊಂದಿಗೆ ಹೋರಾಡಿದ ಶಿಲ್ಪಾಗೆ ಮಹಿಂದ್ರಾ ಗಿಫ್ಟ್
ಮಂಗಳೂರಿನ ಕೊಟ್ಟಾರದಲ್ಲಿರುವ ಬೊಲೆರೋ ಶೋ ರೂಮ್ ನಲ್ಲಿ ಶಿಲ್ಪಾ ಅವರಿಗೆ ಸರಳ ಸಮಾರಂಭ ಒಂದರಲ್ಲಿ ಬೊಲೆರೋ ಜೀಪ್ ಹಸ್ಥಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿಲ್ಪಾ ಬೊಲೆರೋ ವಾಹನ ಉಡುಗೊರೆಯಾಗಿ ನೀಡಿದ ಆನಂದ್ ಮಹೀಂದ್ರ ಅವರಿಗೆ ಧನ್ಯವಾದ ಸಮರ್ಪಿಸಿದರು.
ಶಿಲ್ಪಾ ಮೂಲತಃ ಹಾಸನ ಜಿಲ್ಲೆಯವರು. ಕಷ್ಟವೆಂದರೆ ಏನೆಂದು ತಿಳಿಯದಂತೆ ತಂದೆ-ತಾಯಿ ಅವರನ್ನು ಸಾಕಿದ್ದರು. 2005 ರಲ್ಲಿ ವಿವಾಹವಾದ ಬಳಿಕ ಅವರು ಮಂಗಳೂರಿಗೆ ಬಂದರು. ಪತಿ ನಗರದಲ್ಲಿ ಟ್ರಾನ್ಸ್ಪೋರ್ಟ್ ವ್ಯವಹಾರ ನಡೆಸುತ್ತಿದ್ದರು.ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವ ಹೊತ್ತಿಗೆ, ಶಿಲ್ಪಾ ಅವರ ಬದುಕಿನ ದಿಕ್ಕೆ ಬದಲಾಯಿತು. ಕಷ್ಟದಿಂದಾಗಿ ಕೈಯಲ್ಲಿದ್ದ ದುಡ್ಡು ಕರಗಿತು ಶಿಲ್ಪಾ ಅವರ ಪತಿ ಬೆಂಗಳೂರಿನಿಂದ ತನಗೆ ಯಾವುದೋ ದುಡ್ಡು ಬರುವುದಿದೆ ಅದನ್ನು ತರುತ್ತೇನೆ ಎಂದು ಹೇಳಿ ಹೋದವರು ಮರಳಲಿಲ್ಲ. ಪತಿಗಾಗಿ ಕಾದು-ಕಾದು ಶಿಲ್ಪಾ ಸುಸ್ತಾದರು. ಕೈಯಲ್ಲಿದ್ದ ಹಣವೂ ಕರಗಿತು. ಶಿಲ್ಪಾಳ ತಂದೆ ತಾಯಿ ಮಗಳ ಜೊತೆ ಬಂದು ನೆಲೆಸಿದರು. ಕೆಲಸಕ್ಕೆ ಸೇರಿದರೂ ಮನೆ ನಿರ್ವಹಣೆ ಕಷ್ಟವಾಯಿತು. ಆಗಲೇ ಸ್ವಂತ ಉದ್ಯೋಗ ಮಾಡಬೇಕು ಎಂಬ ಆಲೋಚನೆ ಶಿಲ್ಪಾ ಅವರಲ್ಲಿ ಮೊಳಕೆಯೊಡೆದ್ದಿತು. ಶಿಲ್ಪಾ ಅವರು ರುಚಿಯಾಗಿ ಅಡುಗೆ ಮಾಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಅವರು, ಬೀದಿ ಬದಿಯ ಮೊಬೈಲ್ ಕ್ಯಾಂಟೀನ್ ತೆರೆಯಲು ನಿರ್ಧರಿಸಿದರು. ಹಣಕ್ಕಾಗಿ ಬ್ಯಾಂಕಿನಿಂದ ಬ್ಯಾಂಕಿಗೆ ಅಲೆದಾಡಿದರು. ಆದರೆ ಎಲ್ಲಿಯೂ ಸಾಲ ಸಿಗಲಿಲ್ಲ.
ಮಗನ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಲ್ಲಿಟ್ಟಿದ್ದ 1 ಲಕ್ಷ ಹಣವನ್ನು ಬಂಡವಾಳ ಮಾಡಿಕೊಂಡು ಹಳೆಯ ಬೊಲೆರೋ ವಾಹನ ಖರೀದಿಸಿ ಕ್ಯಾಂಟೀನ್ ಆರಂಭಿಸಿದರು. ಆರಂಭವಾಯಿತು ಮೊಬೈಲ್ ಕ್ಯಾಂಟೀನ್ ಹಲವಾರು ಕಷ್ಟ ನಷ್ಟಗಳ ನಡುವೆ ಶಿಲ್ಪಾ ಅವರ ಮೊಬೈಲ್ ಕ್ಯಾಂಟೀನ್ ಆರಂಭವಾಯಿತು ಈಗ ಕ್ಯಾಂಟೀನ್ನಲ್ಲಿ ಜೋಳ, ಅಕ್ಕಿ, ರಾಗಿ ರೊಟ್ಟಿ, ತಟ್ಟೆ ಇಡ್ಲಿ, ಬಿಸಿಬೇಳೆ ಬಾತ್, ಟೊಮೆಟೊ ರೈಸ್, ರಾಗಿ ಮುದ್ದೆ ಸಿಗುತ್ತದೆ. ರೊಟ್ಟಿ ಜೊತೆಗೆ ಶಿಲ್ಪಾ ಅವರು ತಯಾರಿಸುವ ಖಡಕ್ ಚಟ್ನಿ, ಹುರಿಗಡಲೆ ಚಟ್ನಿಗೆ ಭಾರಿ ಬೇಡಿಕೆ ಇದೆ. ಕ್ಯಾಂಟೀನ್ನಲ್ಲಿನ ಸೊಪ್ಪಿನಸಾರು, ಚಿಕನ್ ಸಾರು ಸಹ ಜನರನ್ನು ಆಕರ್ಷಿಸುತ್ತದೆ. ಬದುಕು ಎನ್ನುವುದು ಯುದ್ದ ಭೂಮಿ. ಇಲ್ಲಿ ಎದುರಾಗುವ ಕಷ್ಟಗಳಿಗೆ ಹೆದರಿ ಬೆನ್ನುತೋರಿಸಿದರೆ ಬದುಕು ದುರಂತದಲ್ಲಿಯೇ ಅಂತ್ಯವಾಗುತ್ತದೆ, ಆದರೆ ಎದೆಗುಂದದೇ ಮುನ್ನುಗ್ಗಿದರೆ ಬದುಕು ಹಸನಾಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಮಂಗಳೂರಿನ ಮಣ್ಣಗುಡ್ಡೆಯ ಹಳ್ಳಿಮನೆ ರೊಟ್ಟಿಸ್ ಮೊಬೈಲ್ ಕ್ಯಾಂಟೀನ್ ಮಾಲಕಿ ಶಿಲ್ಪಾ. ಶಿಲ್ಪಾ ಅವರ ಜೀವನ ಸಂಘರ್ಷ ಇನ್ನಷ್ಟು ಜನರಿಗೆ ಆದರ್ಶವಾಗಲಿ ಎಂಬುದೇ ಎಲ್ಲರ ಆಶಯ.
Comments