ನಿತ್ಯೋತ್ಸವದ ಕವಿಗೆ ಪಂಪ ಪ್ರಶಸ್ತಿ ಪುರಸ್ಕಾರ
ಇತ್ತೀಚಿನ ದಿನಗಳಲ್ಲಿ ಜಾತಿ ಧರ್ಮ ಹೆಸರಿನಲ್ಲಿ ರಾಜಕೀಯಗಳು ನಡೆಯುತ್ತಿರುವುದು ದುರಾದೃಷ್ಟ. ಪಂಪನ ನಾಡಿನಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ ಭಾಗ್ಯ ನನ್ನದು. 11ವರ್ಷಗಳ ಹಿಂದೆ ಕೈಜಾರಿದ ಪ್ರಶಸ್ತಿ ಇಂದು ಸಿಕ್ಕಿರುವುದು ಸಂತಸ ತಂದಿದೆ. ಇದಕ್ಕೆ ಕಾರಣೀಭೂತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಎಲ್ಲರಿಗೂ ಧನ್ಯವಾದಗಳು ಎಂದು ನಿಸಾರ್ ಅಹಮ್ಮದ್ ನುಡಿದರು.
ಬನವಾಸಿಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ 19ನೇ ಸ್ಥಾನದಲ್ಲಿದೆ. ಅಷ್ಟು ಪ್ರಾಚೀನತೆ ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ. ಯಾವುದೇ ಭಾಷೆಯನ್ನು ದ್ವೇಷಿಸುವ ಅಗತ್ಯವಿಲ್ಲ. ಸಮನ್ವಯ ಸಾಧಿಸಿ ಕನ್ನಡ ಭಾಷೆಯನ್ನು ಹೆಚ್ಚು ಬಳಸುವಂತಾಗಬೇಕು ಎಂದರು. ಯುವ ಪೀಳಿಗೆ ಪಂಪನ ಕೃತಿಗಳು ಸೇರಿದಂತೆ, ವಚನಗಳನ್ನು ಓದಬೇಕು. ವಚನ ಸಾಹಿತ್ಯ ಜಗತ್ತಿಗೆ ಪ್ರಜಾಪ್ರಭುತ್ವ, ಸಮಾನತೆಯನ್ನು ಹೇಳಿದ ಸಾಹಿತ್ಯ ಎಂದರು. ಸಚಿವ ದೇಶಪಾಂಡೆ ನಿಸಾರ್ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಿದರು. ವಿಶು ಕುಮಾರ್, ಶಾಸಕ ಶಿವರಾಮ ಹೆಬ್ಬಾರ ಇದ್ದರು.
Comments