ಜೆಡಿಎಸ್ ಮುಖಂಡರ ಕೆಂಗಣ್ಣಿಗೆ ಗುರಿಯಾದ ಕಾಂಗ್ರೆಸ್
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕುಮಾರಪರ್ವ ಭಾಗ 2 ಕಾರ್ಯಕ್ರಮ ಹಿನ್ನೆಲೆ ಸ್ವಾಗತ ಕೋರಲು ಪಟ್ಟಣದ ಮುಖ್ಯ ರಸ್ತೆಗಳ ಕಂಬಕ್ಕೆ ಕಟ್ಟಿದ್ದ ಜೆಡಿಎಸ್ ಪತಾಕೆಗಳನ್ನು ಕಾಂಗ್ರೆಸ್ ಹಿಡಿತದಲ್ಲಿರುವ ಪುರಸಭೆ ಆಡಳಿತ ಬೆಳಗ್ಗೆ ಏಕಾಏಕಿ ತೆರವುಗೊಳಿಸಿ ಜೆಡಿಎಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.
ನಿನ್ನೆ ಮುದ್ದೇಬಿಹಾಳದಲ್ಲಿ ಕುಮಾರಸ್ವಾಮಿ ಕಾರ್ಯಕ್ರಮ ನಡೆದಿತ್ತು. ಇಂದು ಕೂಡ ಅವರು ಮುದ್ದೇಬಿಹಾಳ ಪಟ್ಟಣದ ಮೂಲಕವೇ ನಾಲತವಾಡ ಪಟ್ಟಣಕ್ಕೆ ತೆರಳಲಿದ್ದು, ಅವರ ನಿರ್ಗಮನಕ್ಕೂ ಮುನ್ನವೇ ತೆರವುಗೊಳಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪುರಸಭೆ ಸದಸ್ಯ ಶರಣು ಬೂದಿಹಾಳಮಠ ಪುರಸಭೆ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮೇಲೆ ತೆರವುಗೊಳಿಸುವುದನ್ನು ಅರ್ಧಕ್ಕೆ ಕೈಬಿಡಲಾಯಿತು. ಈ ಹಿಂದೆ ನಡೆದ ಬೇರೆ ಪಕ್ಷಗಳ, ಸಂಘಟನೆಗಳ ಕಾರ್ಯಕ್ರಮ ಹಿನ್ನಲೆ ಕಟ್ಟಿದ್ದ ಪತಾಕೆಗಳ ಸರಮಾಲೆ, ಫ್ಲೆಕ್ಸ್, ಬ್ಯಾನರ್‌ಗಳನ್ನು ವಾರ ಕಳೆದರೂ ತೆರವುಗೊಳಿಸದೆ ಹಾಗೆ ಬಿಟ್ಟಿರುತ್ತಿದ್ದ ಪುರಸಭೆ ಆಡಳಿತ ಜೆಡಿಎಸ್ ವಿಷಯದಲ್ಲಿ ತುರ್ತು ಕ್ರಮ ಕೈಕೊಂಡಿರುವುದು ದುರುದ್ದೇಶದಿಂದ ಕೂಡಿದೆ ಎಂದು ಶರಣು ದೂರಿದರು.
Comments