ಉದ್ಯೋಗ ಮಟ್ಟದಲ್ಲಿ ಭಾರಿ ಕುಸಿತ
2005-06ರಲ್ಲಿ ಶೇಕಡ 36ರಷ್ಟಿದ್ದ ಮಹಿಳಾ ಉದ್ಯೋಗಿಗಳ ಪ್ರಮಾಣ 2015-16ರ ವೇಳೆಗೆ ಶೇಕಡ 24ಕ್ಕೆ ಕುಸಿದಿದೆ. ಪುರುಷ ಉದ್ಯೋಗಿಗಳ ಪ್ರಮಾಣ ಕೂಡಾ ಒಂದು ದಶಕದ ಅವಧಿಯಲ್ಲಿ ಶೇಕಡ 10ರಷ್ಟು ಇಳಿಕೆ ಕಂಡಿದೆ. ಸಮೀಕ್ಷೆಗಿಂತ ಹಿಂದಿನ 12 ತಿಂಗಳ ಅವಧಿಯಲ್ಲಿ ತಮಗೆ ಉದ್ಯೋಗ ಇಲ್ಲ ಎಂದು ಶೇಕಡ 70ರಷ್ಟು ಮಹಿಳೆಯರು ಮತ್ತು ಶೇಕಡ 19ರಷ್ಟು ಪುರುಷರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಉದ್ಯೋಗ ಮಟ್ಟ ಗಣನೀಯವಾಗಿ ಕುಸಿದಿದ್ದು, ಮಹಿಳಾ ಉದ್ಯೋಗಿಗಳ ಸಂಖ್ಯೆಯಂತೂ ಆತಂಕಕಾರಿ ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಪಡಿಸಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೃತ್ತಿಪರ, ತಾಂತ್ರಿಕ, ಆಡಳಿತಾತ್ಮಕ ಹಾಗೂ ವ್ಯವಸ್ಥಾಪನಾ ಕ್ಷೇತ್ರದಲ್ಲಿ ಪುರುಷರಿಗಿಂತ ಅಧಿಕ ಪ್ರಮಾಣದಲ್ಲಿ ಉದ್ಯೋಗ ಪಡೆಯುತ್ತಿದ್ದರೂ, ಒಟ್ಟಾರೆಯಾಗಿ ಮಹಿಳಾ ಉದ್ಯೋಗ ಮಟ್ಟ ಕುಸಿದಿರುವುದು ಸಮೀಕ್ಷೆಯಿಂದ ಡೃಢಪಟ್ಟಿದೆ. ಮುಖ್ಯವಾಗಿ ಕೃಷಿ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಲಭಿಸುತ್ತಿದೆ. ಶೇಕಡ 48ರಷ್ಟು ಮಹಿಳೆಯರು ಕೃಷಿ ಕಾರ್ಮಿಕರಾಗಿ ಹಾಗೂ ಶೇಕಡ 32ರಷ್ಟು ಪುರುಷರು ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಪಡೆದಿದ್ದಾರೆ. ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಪಡೆದವರ ಪ್ರಮಾಣ ಕ್ರಮವಾಗಿ ಶೇಕಡ 21 ಮತ್ತು 32. ವೃತ್ತಿಪರ, ತಾಂತ್ರಿಕ, ಆಡಳಿತಾತ್ಮಕ ಅಥವಾ ವ್ಯವಸ್ಥಾಪನಾ ವೃತ್ತಿಗಳಲ್ಲಿ ಶೇಕಡ 10ರಷ್ಟು ಮಹಿಳೆಯರು ಹಾಗೂ ಶೇಕಡ 8ರಷ್ಟು ಪುರುಷರು ಉದ್ಯೋಗ ಪಡೆದಿದ್ದಾರೆ.
Comments