ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಸರಳ, ಸುಲಭ ಮತ್ತು ಪರಿಣಾಮಕಾರಿಯಾದ ತೆರಿಗೆ ವ್ಯವಸ್ಥೆ ರೂಪಿಸಲು ಕರೆ ನೀಡಿದ್ದು, ತೆರಿಗೆ ನೆಲೆ ವಿಸ್ತರಣೆಗೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಐ.ಟಿ. ರಿಟರ್ನ್ಸ್ ಸಲ್ಲಿಕೆಗೆ ಇರುವ ಗೊಂದಲಗಳಿಂದಾಗಿ ವೇತನದಾರರು ಮತ್ತು ಮಧ್ಯಮ ಆದಾಯದ ವರ್ಗಗಳಿಗೆ ಸೇರಿದವರು ಆದಾಯ ತೆರಿಗೆ ಮಾಹಿತಿ ಸಲ್ಲಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಭಾವಿಸಿದೆ.
ಈ ಹಿನ್ನಲೆಯಲ್ಲಿ ಮಧ್ಯಮ ವರ್ಗದವರು ಆದಾಯ ತೆರಿಗೆ ಪಾವತಿಸುವುದನ್ನು ಸರಳಗೊಳಿಸಲು ಮುಂದಾಗಿದ್ದು, ಹೂಡಿಕೆ ದಾಖಲೆ ನೀಡಿಕೆಯಿಂದ ವಿನಾಯಿತಿ ನೀಡುವ ಸಾಧ್ಯತೆ ಇದೆ. ಬಜೆಟ್ ನಲ್ಲಿ ಇದನ್ನು ಘೋಷಿಸುವ ಸಾಧ್ಯತೆ ಇದ್ದು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವಾಗ ತೆರಿಗೆ ವಿನಾಯಿತಿ ಹೂಡಿಕೆಗಳಿಗೆ ದಾಖಲೆ ಸಲ್ಲಿಸಬೇಕೆಂಬ ನಿಯಮವನ್ನು ರದ್ದುಪಡಿಸುವ ಸಾಧ್ಯತೆ ಇದೆ. ದಾಖಲೆ ಸಲ್ಲಿಕೆಗೆ ಇರುವ ನಿಯಮಗಳನ್ನು ರದ್ದುಪಡಿಸುವಂತೆ ತೆರಿಗೆದಾರರು ಮನವಿ ಮಾಡಿದ್ದು, ಇಲಾಖೆ ಇದನ್ನು ಪರಿಗಣಿಸಿದೆ. ಬ್ಯಾಂಕ್ ಖಾತೆ, ವಿಮಾ ಪಾಲಿಸಿ ಮೊದಲಾದವುಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ. ತೆರಿಗೆದಾರರ ಮಾಹಿತಿ ಐ.ಟಿ. ಇಲಾಖೆಯ ಬಳಿ ಇದೆ. ಹಾಗಾಗಿ ಪ್ರತಿ ಮಾಹಿತಿಯನ್ನು ಕೂಡ ತೆರಿಗೆದಾರರು ನೀಡಬೇಕೆಂದಿಲ್ಲ. ಪ್ರಸ್ತುತ 2.5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಇದೆ. 5 ಲಕ್ಷ ರೂ.ಗೆ ಏರಿಕೆ ಮಾಡಬೇಕೆಂಬ ಬೇಡಿಕೆ ಇದ್ದು, ಇದನ್ನು 3 ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ. ಬಜೆಟ್ ಮೇಲಿನ ಕುತೂಹಲ ಹೆಚ್ಚಾಗಿದೆ.
Comments