ಆದಾಯ ತೆರಿಗೆ ಇಲಾಖೆಯಿಂದ ಶಾರುಕ್ ಖಾನ್ ರ ಐಷಾರಾಮಿ ಬಂಗಲೆ ಜಪ್ತಿ!

31 Jan 2018 10:20 AM | General
306 Report

ಮೂಲಗಳ ಪ್ರಕಾರ ನಟ ಶಾರುಕ್ ಖಾನ್ ಅವರು ಕೃಷಿಕಾರ್ಯಕ್ಕೆ ಭೂಮಿ ಖರೀದಿಸುವುದಾಗಿ ಹೇಳಿ, ಬಳಿಕ ಆ ಭೂಮಿಯನ್ನು ತಮ್ಮ ವೈಯಕ್ತಿಕ ಉಪಯೋಗಕ್ಕಾಗಿ ಫಾರ್ಮ್ಹೌಸ್ ಆಗಿ ಮಾರ್ಪಡಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇಂದು ದಾಳಿ ಮಾಡಿರುವ ಅಧಿಕಾರಿಗಳು ಪ್ರಸ್ತುತ ಮುಂಬೈನ ಅಲಿಬಾಗ್ ಪ್ರದೇಶದಲ್ಲಿರುವ ಅದ್ಧೂರಿ ಫಾರ್ಮ್ ಹೌಸ್ ಅನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಅಕ್ರಮ ವಹಿವಾಟಿನ ಆರೋಪದ ಮೇರೆಗೆ ಬಾಲಿವುಡ್ ನಟ ಶಾರುಕ್ ಖಾನ್ ಅವರ ಐಶಾರಾಮಿ ಬಂಗಲೆಯನ್ನು ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ತಿಳಿಸಿರುವಂತೆ ದೆಜ ವು ಫಾರ್ಮ್ಸ್ ಪ್ರೈ.ಲಿ. ಎಂಬ ಹೆಸರಿನಲ್ಲಿ ನೋಂದಣಿಯಾಗಿರುವ ಈ ಫಾರ್ಮ್ ಹೌಸನ್ನು ಬೇನಾಮಿಯಾಗಿ ನೋಂದಣಿ ಮಾಡಲಾಗಿದೆ. ಅಲ್ಲದೆ ಕೃಷಿ ಮಾಡುವುದಾಗಿ ಹೇಳಿ ಭೂಮಿ ಖರೀದಿ ಮಾಡಿದ್ದ ಶಾರುಕ್ ಖಾನ್ ಐಶಾರಾಮಿ ಫಾರ್ಮ್ ಹೌಸ್ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ. 2004ರಲ್ಲಿ ಶ್ರೀನಿವಾಸ ಪಾರ್ಥಸಾರಥಿ ಹಾಗೂ ಸೋಮಶೇಖರ್ ಸುಂದರೇಶನ್ ಸೇರಿಕೊಂಡು ಈ ದೆಜ ವು ಫಾರ್ಮ್ಸ್ ನಿರ್ಮಿಸಿದ್ದರು. ಬಳಿಕ ಅದೇ ವರ್ಷ ಷೇರು ಪತ್ರಗಳನ್ನು ಶಾರೂಕ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಹೆಸರಿಗೆ ವರ್ಗಾಯಿಸಲಾಗಿದೆ. ಅದೇ ದಿನ ರಮೇಶ್ ಛಿಬ, ಸವಿತಾ ಛಿಬ ಹಾಗೂ ರಾಜಾರಾಮ್ ಅಜ್ಗಾಂವ್ ಕರ್ ಅವರನ್ನು ಪ್ರಥಮ ನಿರ್ದೇಶಕರೆಂದು ಹೆಸರಿಸಲಾಗಿತ್ತು. ರಾಜಾರಾಮ್ ತನ್ನನ್ನು ಕೃಷಿಕ ಎಂದು ಹೇಳಿಕೊಂಡಿದ್ದರು ಎಂದು ತೆರಿಗೆ ಇಲಾಖೆ ತಿಳಿಸಿದೆ. ಈ ವ್ಯವಹಾರದಲ್ಲಿ ಭಾರೀ ಅಕ್ರಮ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಇದೇ ಕಾರಣಕ್ಕೆ ಪ್ರಸ್ತುತ ಫಾರ್ಮ್ ಹೌಸ್ ಅನ್ನು ಇಲಾಖೆ ತಾತ್ಕಾಲಿಕ ಜಪ್ತಿ ಮಾಡಿದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Edited By

Shruthi G

Reported By

Madhu shree

Comments