ಶೀಘ್ರದಲ್ಲಿ ಆರಂಭಗೊಳ್ಳಲಿರುವ ಸರಕಾರಿ ಇಂಗ್ಲಿಷ್ ಹೈಸ್ಕೂಲ್

ಇಂಗ್ಲಿಷ್ ಮಾಧ್ಯಮ ವಿಭಾಗ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಈ ವರ್ಷದ ಮಾರ್ಚ್ 15ರೊಳಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.
ಸರಕಾರಿ ಪ್ರೌಢಶಾಲೆ/ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ)ಗಳ 8ನೇ ತರಗತಿಯಲ್ಲಿ ಕನ್ನಡ, ಉರ್ದು ಮಾಧ್ಯಮದ ಜತೆಗೆ ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ಮುಂದಿನ ಶೈಕ್ಷಣಿಕ ವರ್ಷದಿಂದಲೇ (2018-19ನೇ ಸಾಲಿನಲ್ಲಿ ) ಸರಕಾರ ಮುಂದಾಗಿದೆ. ಈ ಬಗ್ಗೆ ಅನುಮತಿ ನೀಡಲು ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಬೆಂಗಳೂರು, ಮೈಸೂರು ವಿಭಾಗದ ಜಿಲ್ಲಾ ಉಪ ನಿರ್ದೇಶಕರು ಬೆಂಗಳೂರು ಆಯುಕ್ತರ ಕಚೇರಿಗೆ ಹಾಗೂ ಧಾರವಾಡ ಮತ್ತು ಕಲಬುರ್ಗಿ ವಿಭಾಗದ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯ ಆಯುಕ್ತಾಲಯಕ್ಕೆ ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲು ಪ್ರಸ್ತಾವನೆ ಸಲ್ಲಿಸಬಹುದು. ಅಂತಿಮ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ
Comments