ಭೀತಿಯಲ್ಲಿರುವ ನಿತ್ಯಾನಂದ ಸ್ವಾಮೀಜಿ ..!!
ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುವುದು, ಹಾದಿತಪ್ಪಿಸುವ ಕೆಲಸ ಮಾಡುತ್ತಿರುವುದೂ ಅಲ್ಲದೆ ಪದೇ ಪದೇ ಎಚ್ಚರಿಕೆ ನೀಡಿದರೂ ತಪ್ಪನ್ನು ಸರಿಪಡಿಸಿಕೊಳ್ಳದಿರುವುದರಿಂದ ನ್ಯಾಯಾಧೀಶ ಆರ್. ಮಹದೇವನ್ ಈ ಆದೇಶ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಹೇಳಲಾಗಿದೆ. 'ಈ ನ್ಯಾಯಾಲಯದಲ್ಲಿ ಕಾನೂನೇ ಮುಖ್ಯ, ಅವರು (ನಿತ್ಯಾನಂದ ಸ್ವಾಮೀಜಿ) ಅದಕ್ಕಿಂತ ಮಿಗಿಲಲ್ಲ' ಎಂದ ನ್ಯಾಯಾಧೀಶರು, ಸ್ವಾಮೀಜಿಯನ್ನು ಬಂಧಿಸಲು ವಾರಂಟ್ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಸ್ವಾಮೀಜಿ ಶಿಷ್ಯರೊಬ್ಬರು ನ್ಯಾಯಾಲಯದ ಕಲಾಪಕ್ಕೆ ಸಂಬಂಧಿಸಿದ ಸಂದೇಶಗಳನ್ನು ಕಳುಹಿಸಲು ಬಳಸಿದ್ದರು ಎನ್ನಲಾದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯುವಂತೆಯೂ ಕೋರ್ಟ್ ಸೂಚಿಸಿದೆ. 'ನ್ಯಾಯಾಲಯದ ಕಲಾಪವನ್ನು ರೆಕಾರ್ಡ್ ಮಾಡಿಕೊಳ್ಳಲು ನಿಮಗೆ ಅವಕಾಶ ನೀಡಿದವರು ಯಾರು? ಕಲಾಪದ ಬಗ್ಗೆ ಯಾರಿಗೆ ನೀವು ಸಂದೇಶ ಕಳುಹಿಸುತ್ತಿದ್ದುದು? ನ್ಯಾಯಾಲಯ ಆಟದ ಮೈದಾನವೆಂದು ತಿಳಿಯಬೇಡಿ. ನಿಮ್ಮ ಆಶ್ರಮದ ವಿರುದ್ಧ ನೂರಾರು ಪ್ರಕರಣಗಳ ವಿಚಾರಣೆ ಬಾಕಿ ಇವೆ' ಎಂದು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯದ ಕಲಾಪಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೊರಗಿನವರಿಗೆ ಕಳುಹಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆಯೂ ಅದಕ್ಕೆ ಸಂಬಂಧಿಸಿದ ಮೊಬೈಲ್ ಫೋನ್ ಅನ್ನು ಮುಂದಿನ ವಿಚಾರಣೆವರೆಗೂ ವಶದಲ್ಲಿರಿಸಿಕೊಳ್ಳುವಂತೆಯೂ ಪೊಲೀಸರಿಗೆ ಸೂಚಿಸಲಾಗಿದೆ.
ನಿತ್ಯಾನಂದ ಸ್ವಾಮೀಜಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮದುರೈ ಮಠವನ್ನು ರಕ್ಷಿಸಬೇಕು ಎಂದು ಎಂ. ಜಗತಲಪ್ರತಾಪನ್ ಎಂಬುವವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಿತ್ಯಾನಂದ ಅವರು ಕಾಯಂ ಆಗಿ ಮಠಕ್ಕೆ ಪ್ರವೇಶಿಸದಂತೆ ತಡೆಯಾಜ್ಞೆ ನೀಡಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಿತ್ಯಾನಂದ ಸ್ವಾಮೀಜಿ ಮತ್ತು ಅವರ ಶಿಷ್ಯರು ಮದುರೈ ಮಠ ಪ್ರವೇಶಿಸದಂತೆ 2017ರ ಡಿಸೆಂಬರ್ನಲ್ಲಿ ಮಧ್ಯಂತರ ಆದೇಶ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ನಿತ್ಯಾನಂದ ಸ್ವಾಮೀಜಿ ಸುಳ್ಳು ಹೇಳಿಕೆಗಳನ್ನು ನೀಡಿರುವುದು ಮತ್ತು ಹಾದಿ ತಪ್ಪಿಸುತ್ತಿರುವುದನ್ನು ಕೋರ್ಟ್ ಮನಗಂಡಿತ್ತು. ನಂತರ, ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಹಾಗೂ ಹೇಳಿಕೆಯಲ್ಲಿ ಬದಲಾವಣೆ ಮಾಡಿ ಅಫಿಡವಿಟ್ ಸಲ್ಲಿಸುವಂತೆ ನಿತ್ಯಾನಂದ ಸ್ವಾಮೀಜಿ ಪರ ವಕೀಲರಿಗೆ ಕೋರ್ಟ್ ಎಚ್ಚರಿಕೆ ನೀಡಿತ್ತು. ಆದರೆ, ಸ್ವಾಮೀಜಿ ತಪ್ಪನ್ನು ಸರಿಪಡಿಸಿಕೊಂಡಿರಲಿಲ್ಲ. ಹೀಗಾಗಿ, ನಿತ್ಯಾನಂದ ವಿರುದ್ಧ ಸ್ವಯಂಪ್ರೇರಿತವಾಗಿ ಅಪರಾಧ ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಬುಧವಾರ ನಿಗದಿಪಡಿಸಿದೆ.
Comments