ಜನಾರ್ದನ ಪೂಜಾರಿಯ ಸುಳ್ಳು ಸುದ್ದಿಗೆ ತಿರುಗೇಟು ಕೊಟ್ಟ ಜೆಡಿಎಸ್ ಶಾಸಕ ಮಧು ಬಂಗಾರಪ್ಪ

'ಸಾಲ ಮೇಳದ ಸಂಗ್ರಾಮ ಜನಾರ್ದನ ಪೂಜಾರಿ ಅವರ ಆತ್ಮ ಚರಿತ್ರೆಯಲ್ಲ. ಪೂಜಾರಿಯವರ ಪಾಪದ ಕೊಡ' ಎಂದು ಸೊರಬ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ಸೊರಬದಲ್ಲಿ ಮಾತನಾಡಿದ ಅವರು, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಆತ್ಮ ಚರಿತ್ರೆಯಲ್ಲಿ ಉಲ್ಲೇಖಿಸಿರುವ ವಿಷಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಕೃತಿಯಲ್ಲಿ ಬಂಗಾರಪ್ಪ ಅವರು, ಇಂದಿರಾಗಾಂಧಿ ಅವರಿಗೆ ಅವಾಚ್ಯವಾಗಿ ಮಾತನಾಡಿದ್ದರು, ಒಮ್ಮೆ ಇಂದಿರಾಗಾಂಧಿ ಅವರ ಮೇಲೆ ಹಲ್ಲೆಗೂ ಯತ್ನಿಸಿದ್ದರು ಎಂದು ಬರೆದಿದ್ದಾರೆ. ಇದು ನಿಜವಾಗಿದ್ದರೆ ರಾಜೀವ್ ಗಾಂಧಿ ಬಂಗಾರಪ್ಪ ಅವರನ್ನು ಸಿಎಂ ಮಾಡುತ್ತಿರಲಿಲ್ಲ. ಇದು ಆತ್ಮಕತೆಯಲ್ಲ- ಸುಳ್ಳಿನ ಕಂತೆ. ಅದು ಆಟೋಬಯೋಗ್ರಫಿ ಅಲ್ಲ. ಅವರ ಪಾಪದ ಕೊಡ ಎಂದು ಮಧು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಪೂಜಾರಿ ತಮ್ಮ ಆತ್ಮಕತೆಯಲ್ಲಿ ಬಂಗಾರಪ್ಪ ಅವರ ಬಗ್ಗೆ ಬರೆದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಇದರಿಂದ ಬಂಗಾರಪ್ಪ ಅಭಿಮಾನಿಗಳಿಗೆ ನೋವಾಗಿದೆ. ಜನಾರ್ದನ ಪೂಜಾರಿ ಈಗ ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅರಳು ಮರಳಾಗಿರಬಹುದು ಅಥವಾ ಅವರಿಗೆ ತಲೆಕೆಟ್ಟಿದೆ ಎಂದು ನಾನು ಹೇಳುವುದಿಲ್ಲ. ಬಂಗಾರಪ್ಪ ಅಧಿಕಾರದಿಂದ ಇಳಿದ ಮೇಲೆ ಕಾಂಗ್ರೆಸ್ಸಿಗರೇ ಅವರ ವಿರುದ್ದ ಕ್ಲಾಸಿಕ್ ಕಂಪ್ಯೂಟರ್ ಸೇರಿ ಮೂರು ಪ್ರಕರಣ ದಾಖಲಿಸಿದ್ದರು. ಈ ಎಲ್ಲಾ ಪ್ರಕರಣಗಳಲ್ಲೂ ಬಂಗಾರಪ್ಪ ನಿರ್ದೋಷಿ ಎಂದು ಕೋರ್ಟ್ ಖುಲಾಸೆಗೊಳಿಸಲಾಗಿದೆ. ಆದರೆ ಪೂಜಾರಿ ಬಂಗಾರಪ್ಪ ಭ್ರಷ್ಟಾಚಾರಿ ಎಂದು ಹೇಳಿದ್ದಾರೆ. ಇದು ನ್ಯಾಯಾಂಗ ನಿಂದನೆ ಆಗಲಿದೆ. ತಮ್ಮ ಕ್ಷೇತ್ರದಲ್ಲಿ ಕೋಮುಗಲಭೆ ತಡೆಯಲು ಯಾಕೆ ಸಾಧ್ಯವಾಗಿಲ್ಲ ಏಕೆ ಎಂಬುದನ್ನು ಮೊದಲು ಬರೆಯಿರಿ. ಅವರ ಪಕ್ಷದಲ್ಲಿ ಅವರಿಗೇ ಗೌರವ ಇಲ್ಲ. ಬೇರೆಯವರ ಮೇಲಿರುವ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆ ಹಾಕುವುದಿಲ್ಲ.ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಬಗ್ಗೆ ಪುಸ್ತಕದಲ್ಲಿ ತಪ್ಪು ಸಂದೇಶ ನೀಡಿದ್ದಾರೆ ಎಂದು ಮಧು ಬಂಗಾರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು. 'ಪುಸ್ತಕ ಪೂಜಾರಿಯವರ ಪಾಪದ ಕೊಡ' ಎಂದು ಆಕ್ರೋಶ ವ್ಯಕ್ತಪಡಿಸಿದರು.
Comments