ಕರ್ನಾಟಕದಲ್ಲಿ ಶುರುವಾಗ್ತಿದೆ ಬಂದ್ ರಾಜಕೀಯ ..!

23 Jan 2018 5:50 PM | General
536 Report

ಮೈಸೂರಿನಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶಿಸಲು ಮುಂದಾಗಿದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸುತ್ತಿದ್ದಾರೆ. ಆದರೆ, ಅಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿವೆ. ಕನ್ನಡ ಚಳವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜ್ಯಾದ್ಯಂತ ಬಂದ್ ಆಚರಣೆ ಮಾಡುವುದಾಗಿ ಹೇಳಿದ್ದಾರೆ.

ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಇದು ಸರ್ಕಾರಿ ಕೃಪಾಪೋಷಿತ ಬಂದ್ ಎಂದು ಆರೋಪಿಸಿದೆ. ಕೇವಲ 25ಕ್ಕೆ ಮಾತ್ರವಲ್ಲದೆ ಫೆಬ್ರವರಿ 4ರಂದು ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ.  ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಅಂದು ಬಿಜೆಪಿ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶಿಸಲು ಸಜ್ಜಾಗಿದೆ. ಈ ನಡುವೆ ಪ್ರಧಾನಿ ಆಗಮನದ ದಿನವೂ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್‍ಗೆ ಕರೆ ಕೊಟ್ಟಿವೆ. ಇದು ಬಿಜೆಪಿಯನ್ನು ನಿದ್ದೆಗೆಡುವಂತೆ ಮಾಡಿದೆ.
ರಾಹುಲ್‍ಗೂ ಬಂದ್ ಬಿಸಿ: ಒಂದು ವೇಳೆ ಅಮಿತ್ ಷಾ ಹಾಗೂ ನರೇಂದ್ರ ಮೋದಿ ಆಗಮನದ ದಿನ ಬಂದ್ ಮಾಡಿದ್ದೇ ಆದಲ್ಲಿ ರಾಹುಲ್‍ಗಾಂಧಿ ಕರ್ನಾಟಕಕ್ಕೆ ಆಗಮಿಸುವ ದಿನದಂದು ಬಂದ್‍ಗೆ ಕರೆ ಕೊಡಲು ಬಿಜೆಪಿ ತೀರ್ಮಾನಿಸಿದೆ.

ತಮ್ಮ ನಾಯಕರು ಆಗಮಿಸುವ ಸಂದರ್ಭದಲ್ಲಿ ಬಂದ್ ಮಾಡಿದರೆ ನಾವು ಕೂಡ ರಾಹುಲ್‍ಗೆ ಬಂದ್ ಮೂಲಕವೇ ಸ್ವಾಗತ ಕೋರಿ ಮುಜುಗರ ಸೃಷ್ಟಿಸಬೇಕೆಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಫೆಬ್ರವರಿ 10, 11 ಹಾಗೂ 12ರಂದು ಮೂರು ದಿನಗಳ ಕಾಲ ರಾಹುಲ್‍ಗಾಂಧಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಬಿಜೆಪಿಯ ಕಾರ್ಯಕ್ರಮ ಫ್ಲಾಪ್‍ಶೋ ಆದರೆ ಕಾಂಗ್ರೆಸ್‍ಗೆ ಸಡ್ಡು ಹೊಡೆಯಲು ಕಮಲ ಪಡೆ ರಣತಂತ್ರ ರೂಪಿಸಿದೆ.ಕನ್ನಡಪರ ಸಂಘಟನೆಗಳೇ ರಾಹುಲ್‍ಗಾಂಧಿ ಆಗಮಿಸುವ ವೇಳೆಯೂ ಕರ್ನಾಟಕ ಬಂದ್‍ಗೆ ಕರೆ ಕೊಡಬೇಕೆಂದು ಪಟ್ಟು ಹಿಡಿಯಲಿದೆ. ಇದು ಮುಂದಿನ ದಿನಗಳಲ್ಲಿ ಇನ್ನೂ ಯಾವ ರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು.

Edited By

Shruthi G

Reported By

Madhu shree

Comments