ಟ್ಯಾಂಕರ್ ಉರುಳಿಬಿದ್ದದ್ದಕ್ಕೆ ಊರು ಖಾಲಿ ಮಾಡಿದ ಗ್ರಾಮಸ್ಥರು ..!!
ಅಮೋನಿಯಾ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಉರುಳಿಬಿದ್ದು, ಅನಿಲ ಸೋರಿಕೆಯಾಗಿ ಕೆಲವರು ಅಸ್ವಸ್ಥರಾಗಿ ನೂರಾರು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದ ಘಟನೆ ಗೋವಾದ ಚಿಕಾಲಿಮ್ ಗ್ರಾಮದಲ್ಲಿ ಮುಂಜಾನೆ ಸಂಭವಿಸಿದೆ. ಇಬ್ಬರು ಮಹಿಳೆಯರೂ ಸೇರಿದಂತೆ ಅಸ್ವಸ್ಥಗೊಂಡ ಕೆಲವು ಗ್ರಾಮಸ್ಥರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ರಾಜಧಾನಿ ಪಣಜಿ ಮತ್ತು ವಾಸ್ಕೋ ನಗರವನ್ನು ಸಂಪರ್ಕಿಸುವ ಹೆದ್ದಾರಿ ಬಳಿ ಇಚಿದು 2.45ರ ನಸುಕಿನಲ್ಲಿ ಈ ಘಟನೆ ಸಂಭವಿಸಿದೆ. ವಾಸ್ಕೋದ ಮೊರ್ಮುಗೋವಾ ಬಂದರಿನಿಂದ ಜುವಾರಿ ಇಂಡಸ್ಟ್ರೀಸ್ ಲಿಮಿಟೆಡ್‍ಗೆ ಅಮೋನಿಯಾ ಗ್ಯಾಸ್ ಹೊತ್ತೊಯುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಉರುಳಿ ಬಿತ್ತು. ಈ ದುರ್ಘಟನೆಯಲ್ಲಿ ಟ್ಯಾಂಕರ್‍ನಿಂದ ಅನಿಲ ಸೋರಿಕೆಯಾಗಿ ಹೆದ್ದಾರಿ ಪಕ್ಕದಲ್ಲಿದ್ದ ಚಿಕಾಲಿಮ್ ಗ್ರಾಮ ಮಹಿಳೆಯರೂ ಸೇರಿ ಕೆಲವರು ಅಸ್ವಸ್ಥರಾದರು. ಸುದ್ದಿ ತಿಳಿದ ಕೂಡಲೇ ವಿಪತ್ತ ನಿರ್ವಹಣಾ ತಂಡ ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗ್ರಾಮದ ಜನರನ್ನು ಸ್ಥಳಾಂತರಿಸಿದರು ಎಂದು ಡೆಪ್ಯೂಟಿ ಕಲೆಕ್ಟರ್ ಮಹದೇವ್ ಅರೋಂಡೆಕರ್ ತಿಳಿಸಿದ್ದಾರೆ. ಉಸಿರಾಟದ ತೊಂದರೆಯಿಂದ ನರಳುತ್ತಿರುವ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ವೈದ್ಯಾಧಿಕಾರಿಗಳು ಹೇಳಿದ್ದಾರೆ.
Comments