ಹಳದಿ, ಬಿಳಿ ಹಾಗೂ ಕೆಂಪು ಬಣ್ಣಗಳೊಂದಿಗೆ ವಿನ್ಯಾಸಗೊಂಡ ನಾಡಧ್ವಜ

ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಕಾನೂನಿನ ಅಂಶಗಳ ಪರಿಶೀಲನೆ ಮತ್ತು ಧ್ವಜ ವಿನ್ಯಾಸ ಅಂತಿಮ ಮಾಡುವ ಸಲುವಾಗಿ ಜುಲೈನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸರ್ಕಾರ ರಚನೆ ಮಾಡಿತ್ತು. ಈ ಸಮಿತಿಯು ಸತತ ಸಭೆಗಳನ್ನು ನಡೆದಿ ಧ್ವಜದ ಮಾದರಿಯನ್ನು ಅಂತಮಗೊಳಿಸಿದೆ.
ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸುವ ಸಲುವಾಗಿ ಸರ್ಕಾರ ರಚಿಸಿರುವ ಧ್ವಜ ಸಮಿತಿಯು ನಾಡಧ್ವಜ ವಿನ್ಯಾಸಗೊಳಿಸಿದ್ದು, ಹಳದಿ, ಬಿಳಿ ಹಾಗೂ ಕೆಂಪು ಬಣ್ಣಗಳನ್ನೊಂಡ ನಾಡಧ್ವಜವನ್ನು ಅಂತಿಮಗೊಳಿಸಿದೆ ಎಂದು ಹೇಳಲಾಗುತ್ತಿದೆ. ಸಮಿತಿ ವಿನ್ಯಾಸಗೊಳಿಸಿರುವ ನಾಡಧ್ವಜವು ಹಳದಿ, ಬಿಳಿ ಹಾಗೂ ಕೆಂಪುಗಳನ್ನೊಳಗೊಂಡಿದ್ದು, ಬಿಳಿ ಬಣ್ಣದ ಮಧ್ಯದಲ್ಲಿ ಕರ್ನಾಟಕ ಸರ್ಕಾರದ ಲಾಂಛನ ಮುದ್ರೆ ಗಂಡಬೇರುಂಡ ಇರಲಿದೆ. ನಾಡಧ್ವಜವನ್ನು ವಿನ್ಯಾಸಗೊಳಿಸಿರುವ ಸಮಿತಿಯು ಸೋಮವಾರ ಅಂತಿಮ ಸಭೆಯನ್ನು ನಡೆಸಲಿದ್ದು, ಬಳಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ, ಬಳಿಕ ಸಚಿವರ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿ ಸಚಿವ ಸಂಪುಟದ ಮುಂದೆ ಮಂಡನೆ ಮಾಡಿ ಒಪ್ಪಿಗೆ ಪಡೆದು ಬಳಿಕ ಕೇಂದ್ರ ಸರ್ಕಾರದ ಅನುಮತಿಗೆ ರವಾನಿಸುತ್ತದೆ ಎಂದು ತಿಳಿದುಬಂದಿದೆ. ಧ್ವಜ ಸಮಿತಿಯು ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಪ್ರತ್ಯೇಕ ಧ್ವಜ ಹೊಂದಲು ಯಾವುದೇ ರೀತಿಯ ಕಾನೂನು ಸಮಸ್ಯೆಗಳು ಎದುರಾಗುವುದಿಲ್ಲ. ಕೇಂದ್ರ ಸರ್ಕಾರ ಒಪ್ಪಿಗೆಯಷ್ಟೇ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Comments