"ಅಗ್ನಿ-5" ಕ್ಷಿಪಣೆ ಪರೀಕ್ಷೆ ಸತತ ಐದನೇ ಬಾರಿಯೂ ಯಶಸ್ವಿ
ಕ್ಷಿಪಣಿಯ ಕ್ಯಾನಿಸ್ಟರ್ ವ್ಯವಸ್ಥೆ ವೈರಿಗಳ ಕಣ್ತಪ್ಪಿಸಲು ಸಹಕಾರಿಯಾಗುತ್ತದೆ. ಇದೇ ಕಾರಣಕ್ಕೆ ಭಾರತದ ಈ ಪ್ರಬಲ ಕ್ಷಿಪಣಿ ಇದೀಗ ಚೀನಾ ಮತ್ತು ಪಾಕಿಸ್ತಾನ ದೇಶಗಳ ತಲೆನೋವಿಗೆ ಕಾರಣವಾಗಿದೆ. ಈ ಹಿಂದೆ 2012, 2013, 2015 ಮತ್ತು 2016ರಲ್ಲಿ ಒಟ್ಟು ನಾಲ್ಕು ಬಾರಿ ಅಗ್ನಿ-5 ಕ್ಷಿಪಣಿಯ ಮೂಲ ಆವೃತ್ತಿಯ ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ಈ ನಾಲ್ಕು ಪರೀಕ್ಷೆಯೂ ಅಭೂತಪೂರ್ವ ಯಶಸ್ಸು ಸಾಧಿಸಿತ್ತು.
ಒಡಿಶಾದ ಅಬ್ದುಲ್ ಕಲಾಂ ದ್ವೀಪದಲ್ಲಿ ಅಗ್ನಿ-5 ಪ್ರಬಲ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಬೆಳಗ್ಗೆ 9.53ಕ್ಕೆ ನಡೆಯಿತು. ಈ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದೃಢೀಕರಿಸಿದ್ದಾರೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಈ ಪ್ರಬಲ ಅಣ್ವಸ್ತ್ರ ಕ್ಷಿಪಣಿಯನ್ನು ಸಿದ್ಧಪಡಿಸಿದ್ದು, ಪಾಕಿಸ್ತಾನದ ಬಹುತೇಕ ಪ್ರದೇಶಗಳು ಒಳಗೊಂಡಂತೆ ಉತ್ತರ ಚೀನಾದ ಯಾವುದೇ ಭಾಗ ಮತ್ತು ಪಶ್ಚಿಮದಲ್ಲಿ ಯುರೋಪ್ನ ಕೊನೆಯ ಅಂಚಿನವರೆಗೂ ಕ್ಷಿಪಣಿಯು ತಲುಪುವ ಸಾಮರ್ಥ್ಯ ಹೊಂದಿದೆ. ಅಗ್ನಿ-5 ಮೂರು ಸ್ತರದ ಕ್ಷಿಪಣಿಯಾಗಿದ್ದು,17 ಮೀ. ಉದ್ದ ಮತ್ತು 1.5 ಟನ್ ಭಾರ ಹೊಂದಿದೆ.
ಮೊದಲನೇ ಸ್ತರದ ರಾಕೆಟ್ ಎಂಜಿನ್, ಕ್ಷಿಪಣಿಯನ್ನು 40 ಕಿ.ಮೀ. ಎತ್ತರಕ್ಕೆ ಒಯ್ದರೆ, ಎರಡನೇ ಸ್ತರವು ಕ್ಷಿಪಣಿಯನ್ನು 150 ಕಿ.ಮೀ. ಎತ್ತರಕ್ಕೆ ನೂಕುತ್ತದೆ. 3ನೇ ಸ್ತರವು ಭೂಮಿಗಿಂತ 300 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯುತ್ತದೆ. ಅಂತಿಮವಾಗಿ ಸುಮಾರು 800 ಕಿ.ಮೀ. ಎತ್ತರಕ್ಕೆ ಕ್ಷಿಪಣಿ ತಲುಪುತ್ತದೆ. ಸುಮಾರು 1 ಸಾವಿರ ಕೆಜಿ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಪ್ರಬಲ ಕ್ಷಿಪಣಿಗಿದ್ದು, ಸಂಚಾರಿ ಸಾಮರ್ಥ್ಯ ಇರುವ ಡಬ್ಬಿಯಾಕಾರದ ಕ್ಯಾನಿಸ್ಟರ್ನಲ್ಲಿಟ್ಟು ಉಡಾಯಿಸುವಂಥ ಮಾದರಿಯ ಕ್ಷಿಪಣಿ ಇದು. ಉಡಾವಣೆಗೆ ಸ್ಥಿರ ವೇದಿಕೆಯೇ ಬೇಕೆಂದೇನೂ ಇಲ್ಲ. ಮೊಬೈಲ್ ಲಾಂಚರ್ ವಾಹನ ಬಳಕೆ ಮಾಡಿ ಈ ಕ್ಷಿಪಣಿಯನ್ನು ದೇಶದ ಯಾವುದೇ ಮೂಲೆಯಿಂದಾದರೂ ತ್ವರಿತವಾಗಿ ಉಡಾಯಿಸಬಹುದಾಗಿದೆ.
Comments