ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕವನ್ನು ಲಾಲ್ ಬಾಗ್ ನಲ್ಲಿಯೇ ನೋಡಬಹುದು..!!

ಪ್ರತಿ 12 ವರ್ಷಕ್ಕೊಮ್ಮೆ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಈ ಬಾರಿ 88 ನೇ ಮಹಾಮಸ್ತಕಾಭೀಷೇಕ ಫೆಬ್ರವರಿಯಲ್ಲಿ ನಡೆಯಲಿದೆ. ಅದರ ನೆನಪಿಗಾಗಿ ಈ ಬಾರಿ ಲಾಲ್ ಬಾಗ್ ನಲ್ಲಿ ಮಹಾಮಸ್ತಕಾಭಿಷೇಕದ ಪರಿಕಲ್ಪನೆಯಡಿ ಗೊಮ್ಮಟೇಶ್ವರ ಮೂರ್ತಿ ಮತ್ತು ಶ್ರವಣಬೆಳಗೊಳದ ಚಿತ್ರಣವನ್ನು ನಿರ್ಮಿಸಲಾಗುತ್ತದೆ.
ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಇನ್ನು ಒಂದೇ ದಿನ ಬಾಕಿ ಇದೆ, ಈ ಬಾರಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಶ್ರವಣಬೆಳಗೊಳದ ಬಾಹುಬಲಿಯ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕವನ್ನು ಈ ಬಾರಿ ಲಾಲ್ ಬಾಗ್ ನಲ್ಲಿಯೇ ನೋಡಬಹುದು, ಗಾಜಿನ ಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ ವೀಕ್ಷಕರಿಗೆ ಶ್ರವಣಬೆಳಗೊಳವನ್ನು ಅನತಿ ದೂರದಿಂದ ವೀಕ್ಷಿಸಿದಾಗ ಸಿಗುವ ಪ್ರಾಕೃತಿಕ ಹಿತಾನುಭವ ದೊರೆಯಲಿದೆ. ಗಾಜಿನ ಮನೆಯ ಮಧ್ಯಭಾಗದಲ್ಲಿ 60/40 ಅಡಿ ವಿಸ್ತೀರ್ಣದಲ್ಲಿ ಹಾಗೂ 30 ಅಡಿ ಎತ್ತರಕ್ಕೆ ಶ್ರವಣಬೆಳಗೊಳದ ಇಂದ್ರಗಿರಿ ಬೆಟ್ಟ ಮೈದಳೆದು ನಿಲ್ಲಲಿದೆ. ಉದ್ಯಾನ ಆಯ್ದ ಭಾಗಗಳಲ್ಲಿ ಸಿರಿಧಾನ್ಯ ಸೇರಿದಂತೆ ನಾನಾ ವಸ್ತುಗಳಲ್ಲಿ ಬಾಹುಬಲಿಯ ಪ್ರತಿಮೆ, ಚಿತ್ರಗಳಿಗೆ ರೂಪ ಕೊಡಲಾಗುತ್ತಿದೆ. ಗಾಜಿನ ಮನೆಯಲ್ಲಿ ಫೈಬರ್ ನಿಂದ ಮಾಡಿದ ಬೃಹತ್ ಬಾಹುಬಲಿಯ ಮೂರ್ತಿ ಇರಲಿದೆ. ನವಣೆ, ಸಜ್ಜೆ, ರಾಗಿ, ಬರಗು ಇತ್ಯಾದಿ ಸಿರಿಧಾನ್ಯಗಳನ್ನು ಬಳಸಿ ಕಲಾವಿದ ಶಿವಲಿಂಗಪ್ಪ ಬಡಿಗೇರ್ ಅವರು ಬಾಹುಬಲಿ ಮುಖದ ಕಲಾಕೃತಿ ರೂಪಿಸಿದ್ದಾರೆ. 22 ರಿಂದ25 ರವರೆಗೆ ಶಾಲಾ ಮಕ್ಕಳಿಗೆ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶವಿರುತ್ತದೆ. ಖಾಸಗಿ ಹಾಗೂ ಸರ್ಕಾರಿ ಶಾಲಾ ಮಕ್ಕಳು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಆಗಮಿಸಬಹುದಾಗಿದೆ..
Comments