ಗ್ರಾಹಕರು ಚಿನ್ನ ಖರೀದಿಸುವ ಮುನ್ನ ಒಮ್ಮೆ ಯೋಚಿಸಿ !

ಆರು ಲಕ್ಷಕ್ಕಿಂತ ಅಧಿಕ ಮೌಲ್ಯದ ಚಿನ್ನ ಖರೀದಿಯನ್ನು ಇನ್ನು ಮುಂದೆ ಆಭರಣ ಮಳಿಗೆಗಳು ಸರ್ಕಾರಕ್ಕೆ ವರದಿ ಮಾಡಬೇಕಾಗುತ್ತದೆ. ಹಣಕಾಸು ಗುಪ್ತಚರ ವಿಭಾಗಕ್ಕೆ ಇದನ್ನು ವರದಿ ಮಾಡಬೇಕಾಗುತ್ತದೆ. ಹಣ ದುರ್ಬಳಕೆ ತಡೆಯ ಸಲುವಾಗಿ ಈ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಇದು ಚಿನ್ನ ಹಾಗೂ ಐಷಾರಾಮಿ ವಸ್ತುಗಳ ಖರೀದಿಗೆ ಅನ್ವಯಿಸುತ್ತದೆ.
"ಜಾಗತಿಕವಾಗಿ ಹಲವು ದೇಶಗಳಲ್ಲಿ, 10 ಸಾವಿರ ಡಾಲರ್ಗಿಂತ ಅಧಿಕ ಮೌಲ್ಯದ ವಹಿವಾಟುಗಳನ್ನು ವರದಿ ಮಾಡುವ ಪದ್ಧತಿ ಇದೆ. ಭಾರತದಲ್ಲಿ ಈ ಮೌಲ್ಯದ ಮಿತಿ ನಿಗದಿಪಡಿಸುವ ಬಗ್ಗೆ ಚರ್ಚೆ ನಡೆದಿದೆ. ಸುಮಾರು ಆರು ಲಕ್ಷದ ಆಸುಪಾಸಿನ ಮಿತಿ ನಿಗದಿಪಡಿಸುವ ಬಗ್ಗೆ ಒಮ್ಮತಕ್ಕೆ ಬರುವ ಸಾಧ್ಯತೆ ಇದೆ" ಎಂದು ಮೂಲಗಳು ಖಚಿತಪಡಿಸಿವೆ. ಹಣ ದುರ್ಬಳಕೆ ಪ್ರಕರಣಗಳನ್ನು ಕಾನೂನು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದ್ದರೂ, ಈ ವರದಿಯು, ಆದಾಯಕ್ಕಿಂತ ಅಧಿಕ ಮೌಲ್ಯದ ಖರೀದಿ ಮಾಡುವುದನ್ನು ಪತ್ತೆ ಮಾಡಲು ಆದಾಯ ತೆರಿಗೆ ಇಲಾಖೆಗೂ ಇದು ನೆರವಾಗುವ ಸಾಧ್ಯತೆ ಇದೆ. ಕಪ್ಪುಹಣಕ್ಕೆ ತಡೆಯೊಡ್ಡುವ ಎನ್ಡಿಎ ಸರ್ಕಾರದ ಪ್ರಯತ್ನಕ್ಕೂ ಇದು ಪೂರಕವಾಗಲಿದೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಎರಡು ಲಕ್ಷಕ್ಕಿಂತ ಅಧಿಕ ಮೌಲ್ಯದ ನಗದು ವಹಿವಾಟು ನಿಷೇಧಿಸಲಾಗಿದ್ದು, 50 ಸಾವಿರಕ್ಕಿಂತ ಅಧಿಕ ಮೌಲ್ಯದ ವಹಿವಾಟಿಗೆ ಪಾನ್ ಸಂಖ್ಯೆ ನಮೂದಿಸುವುದು ಕಡ್ಡಾಯ.
Comments