ವಿದ್ಯಾರ್ಥಿಗಳ ಜೊತೆ ಸಂವಾದಲ್ಲಿ ಎಚ್ ಡಿಕೆ ಕೊಟ್ಟ ಭರವಸೆ ಏನು ಗೊತ್ತಾ?

ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಒಂದು ದಿನ ರಾಜ್ಯದ ವಿದ್ಯಾರ್ಥಿಗಳನ್ನು ವಿಧಾನ ಸಭೆಗೆ ಕರೆಸಿ ಸಂವಾದ ನಡೆಸಿ ಸಮಸ್ಯೆ ಅರಿಯುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಹೇಳಿದರು.ನಗರದ ಕರ್ನಾಟಕ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳೊಂದಿಗೆ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐಎಎಸ್ ಅಧಿಕಾರಿಗಳು ನೀಡುವ ಮಾಹಿತಿ ಮೇಲೆ ಸರ್ಕಾರ ಆಡಳಿತ ನಡೆಸಬಾರದು. ಜನರ ಮಾಹಿತಿ ಮೇರೆಗೆ ಅಧಿಕಾರ ಚಲಾಯಿಸಬೇಕು. ಅದುವೇ ನಿಜವಾದ ಪ್ರಜಾಪ್ರಭುತ್ವ. ಅದಕ್ಕೋ ಸ್ಕರವೇ ತಾವು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಆರಂಭಿಸಲಾಗಿತ್ತು ಎಂದು ನುಡಿದರು. ಬಾಣಂತಿ ಹಾಗೂ ಮಗುವಿನ ಸುರಕ್ಷತೆಗಾಗಿ ಪ್ರಸವ ಪೂರ್ವ ಮೂರು ಹಾಗೂ ಹೆರಿಗೆ ಬಳಿಕ ಮೂರು ತಿಂಗಳು ಒಟ್ಟು 6 ತಿಂಗಳು ಮಗು ಹಾಗೂ ತಾಯಿ ಸುರಕ್ಷತೆಗಾಗಿ ಹೊಸ ಯೋಜನೆ ಜಾರಿಗೊಳಿಸಿ 6ಸಾವಿರ ಕೋಟಿ ರೂ. ಒದಗಿಸುವ ಚಿಂತನೆ ಇದೆ. ಯಾವುದೇ ಮಗು ಹಾಗೂ ತಾಯಿ ಪೌಷ್ಠಿಕಾಂಶ ಕೊರತೆಯಿಂದ ಸಾಯಬಾರದು ಎಂದು ಹೇಳಿದರು.
ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದ್ದು, ಅದರ ಸುಧಾ ರಣೆಗೆ ಕ್ರಮ ಕೈಗೊಳ್ಳುತ್ತೇನೆ ಎಂದ ಕುಮಾರಸ್ವಾಮಿ, ವಿದ್ಯಾರ್ಥಿಗಳ ನಡುವೆ ಜಾತಿ ಭೇಧ ಮಾಡದೇ ಎಲ್ಲರಿಗೂ ಲ್ಯಾಪಟಾಪ್ ಒದಗಿಸಲಾಗುವುದು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಚುನಾವಣೆ ಗಮನ ದಲ್ಲಿಟ್ಟುಕೊಂಡು ಕೆಲವೇ ಜಾತಿಗಳ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸುತ್ತಿದೆ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಪ್ರತಿಕ್ರೀಯಿಸಿದರು.ಹಲವು ವಿದ್ಯಾರ್ಥಿಗಳು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಕ್ಷಣದಲ್ಲಿ ಮೀಸಲಾತಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಬೇರೆ ಜಾತಿಗಳಲ್ಲೂ ಅನೇಕ ಬಡವರಿದ್ದಾರೆ. ವಿದ್ಯಾರ್ಥಿ ಸಮುದಾಯದಲ್ಲಿ ಏಕೆ ತಾರತಮ್ಯ ಮಾಡಲಾಗುತ್ತಿದೆ ? ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳನ್ನೇ ಕುಮಾರಸ್ವಾಮಿ ಅವರಿಗೆ ಕೇಳಿದರು.ಓರ್ವ ವಿದ್ಯಾರ್ಥಿ ಮೀಸಲಾತಿ ಕೇವಲ 10ವರ್ಷಕ್ಕೆ ಮಾತ್ರ ನೀಡಲಾಗಿತ್ತು. ಆದರೆ, ಈವರೆಗೂ ಮುಂದುವರೆದಿದೆ. ಇದು ಸರಿಯೇ ? ಎಂದು ಕೇಳಿದ.ಇದಕ್ಕೆ ಪ್ರತಿಕ್ರೀಯಿಸಿದ ಕುಮಾರಸ್ವಾಮಿ, ಎಲ್ಲಾ ರಾಜಕೀಯ ಪಕ್ಷಗಳು ಮತ ಬ್ಯಾಂಕ್ಗಾಗಿ ಓಲೈಕೆ ರಾಜಕಾರಣ ಮಾಡಲಾಗುತ್ತಿದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂಬ ಸ್ಥಿತಿ ರಾಜಕೀಯ ಪಕ್ಷಗಳದ್ದಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು.
ತಮ್ಮ ಪಕ್ಷ ಅಧಿಕಾರಕ್ಕೇರಿದರೆ ಅರಣ್ಯ ಇಲಾಖೆ ಜಾರಿಗೊಳಿಸುತ್ತಿರುವ ಸಸಿ ನೆಡುವ ಕಾರ್ಯ ಹಳ್ಳಿಗಳ ಅವಿದ್ಯಾವಂತರಿಗೆ ನೀಡಲಾಗುವುದು. ತಿಂಗಳಿಗೆ 5ಸಾವಿರ ರೂ. ವೇತನ ನೀಡಲಾಗುವುದು. ರಾಜ್ಯದ ಜನರು ತಮ್ಮ ಮೇಲೆ ವಿಶ್ವಾಸ ಇಡಬೇಕು. ಬೆಂಬಲಿಸುವ ಮೂಲಕ ಅಧಿಕಾರಕ್ಕೇರಲು ಸಹಕರಿಸಬೇಕು ಎಂದು ಮನವಿ ಮಾಡಿದರು.ಜೆಡಿಎಸ್ ಅಧಿಕಾರಕ್ಕೇರಿದ ಬಳಿಕ ಮೊಟ್ಟ ಮೊದಲು ಮಾಡುವ ಕೆಲಸ ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡುವುದು ಎಂದು ಹೇಳಿದ ಕುಮಾರಸ್ವಾಮಿ, ಒಟ್ಟು ರೈತರ ಸಾಲ 51ಸಾವಿರ ಕೋಟಿ ರೂ. ಆಗಿದೆ. ಹೀಗೆ ಸಾಲ ಮನ್ನಾ ಮಾಡಿದರೆ ರಾಜ್ಯದ ಆರ್ಥಿಕ ಸ್ಥಿತಿ ಹಿನ್ನೆಡೆಯಾಗುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ, ದೊಡ್ಡ ದೊಡ್ಡ ಉದ್ದಿಮೆದಾರರ ಸಾಲ ಮನ್ನಾ ಮಾಡಿದರೆ ಆರ್ಥಿಕ ಕುಸಿತ ಉಂಟಾಗುವುದಿಲ್ಲವೇ ? ರೈತರ ಸಾಲ ಮನ್ನಾ ಮಾಡಲು ಇಚ್ಛಾಶಕ್ತಿ ಬೇಕು. ಅದನ್ನು ಜೆಡಿಎಸ್ ಮಾಡಲಿದೆ ಎಂದರು.ಮಹಿಳೆಯರ ಮೇಲೆ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರ, ಕೊಲೆ ಘಟನೆಗಳ ಬಗ್ಗೆ ವಿದ್ಯಾರ್ಥಿನಿಯೋರ್ವಳ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಕಂಡಲ್ಲಿ ಗುಂಡಿಡುವ ಕಾನೂನು ಜಾರಿಗೆ ತರಲಾಗುವುದು. ಈ ಮೂಲಕ ರಾಜ್ಯದಲ್ಲಿ ಮುಕ್ತ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದರು.ಪ್ರಾದೇಶಿಕ ಅಸಮಾನತೆ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಅವರು, ಕೈಗಾರಿಕೆಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸದೇ ಎರಡನೇ ಹಂತದ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಒದಗಿಸುವುದಕ್ಕೆ ತಮ್ಮದು ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು.
Comments