ಬಿಜೆಪಿ ಪರಿವರ್ತನಾ ಯಾತ್ರೆ ಫೆಬ್ರವರಿ 4ಕ್ಕೆ ಮುಂದೂಡಿಕೆ

13 Jan 2018 11:53 AM | General
343 Report

ಫೆಬ್ರವರಿ 1ರಂದು ಕೇಂದ್ರ ಬಜೆಟ್‌ ಮಂಡನೆ ಇರುವ ಹಿನ್ನೆಲೆಯಲ್ಲಿ ಜ. 28ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಫೆ. 4ಕ್ಕೆ ಮುಂದೂಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪರಿವರ್ತನಾ ಯಾತ್ರೆಯ ಸಮಾರೋಪವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ. 28ರಂದು ಹಮ್ಮಿಕೊಳ್ಳಲು ಈ ಹಿಂದೆ ನಿರ್ಧರಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಮಾರಂಭದಲ್ಲಿ ಭಾಗವಹಿಸುವವರಿದ್ದರು. ಆದರೆ, ಫೆ. 1ರಂದು ಕೇಂದ್ರ ಬಜೆಟ್‌ ಮಂಡನೆ ಇರುವುದರಿಂದ ಅದಕ್ಕೆ ಸಿದ್ಧತೆಗಳನ್ನು ನಡೆಸಬೇಕಾಗುತ್ತದೆ. ಹೀಗಾಗಿ 28ರಂದು ಕಾರ್ಯಕ್ರಮಕ್ಕೆ ಬರುವುದು ಕಷ್ಟಸಾಧ್ಯ. ಆದ್ದರಿಂದ ಸಮಾರೋಪವನ್ನು ಮುಂದೂಡುವಂತೆ ಪ್ರಧಾನಿ ಸಲಹೆ ಮಾಡಿದರು. ಇದಕ್ಕೆ ಒಪ್ಪಿದ ಅಮಿತ್‌ ಶಾ ಮತ್ತಿತ್ತರ ಪದಾಧಿಕಾರಿಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಫೆ. 4ರ ದಿನಾಂಕ ನಿಗದಿಮಾಡಿದರು. ಅದರಂತೆ ಪರಿವರ್ತನಾ ಯಾತ್ರೆಯ ಸಮಾರೋಪವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲೇ ಫೆ. 4ರಂದು ನಡೆಸಲು ತೀರ್ಮಾನಿಸಲಾಯಿತು. ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಆಗಮಿಸುತ್ತಾರೆ.

Edited By

Shruthi G

Reported By

Madhu shree

Comments