ಲೆಕ್ಕ ಕೇಳಿದ ಅಮಿತ್ ಷಾಗೆ ತಿರುಗೇಟು ಕೊಟ್ಟ ಜೆಡಿಎಸ್ ಮುಖಂಡ ಸಿಂಧ್ಯಾ

ಕೇಂದ್ರದಿಂದ ಬಿಡುಗಡೆಯಾಗಿರುವ ಮೂರು ಲಕ್ಷ ಕೋಟಿ ಅನುದಾನ ನಮ್ಮ ಪಾಲು; ನಮ್ಮ ಹಕ್ಕು. ಇದರ ಲೆಕ್ಕ ಕೇಳುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮೊದಲು ಇದನ್ನು ತಿಳಿದುಕೊಳ್ಳಲಿ ಎಂದು ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯಾ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಕೇಂದ್ರದ ಗುಲಾಮರಲ್ಲ. ಕೇಂದ್ರ ಸರ್ಕಾರ 3 ಲಕ್ಷ ಕೋಟಿ ಅನುದಾನ ಕೊಟ್ಟಿದೆ. ಲೆಕ್ಕ ಕೊಡಿ ಎಂದು ಕೇಳುತ್ತಾರೆ. ನಮ್ಮ ಪಾಲಿನ ಹಣವನ್ನು ಕೊಟ್ಟಿದೆ. ಯಾವ ಯಾವ ಇಲಾಖೆಗೆ ಎಷ್ಟೆಷ್ಟು ಹಣ ಕೊಟ್ಟಿದೆ ಎಂಬುದನ್ನು ಅವರು ಮೊದಲು ಹೇಳಲಿ. ಅದನ್ನು ಬಿಟ್ಟು ಸಾರಾಸಗಟಾಗಿ ಅನುದಾನ ಕೊಟ್ಟಿದೆ, ಲೆಕ್ಕ ಕೊಡಿ ಎಂದು ಕೇಳುತ್ತಾರೆ. ಇದು ಎಷ್ಟು ಸಮಂಜಸ. ನಾವೇನು ಇವರ ಗುಲಾಮರೇ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಆರ್‍ಎಸ್‍ಎಸ್‍ಅನ್ನು ಬ್ಯಾನ್ ಮಾಡಬೇಕು ಎಂದು ಹೇಳುತ್ತಾರೆ. ಇವರದೇ ಪಕ್ಷ ಅಧಿಕಾರದಲ್ಲಿದೆ. ಆರ್‍ಎಸ್‍ಎಸ್ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರೆ ಮಾಹಿತಿ ಸಂಗ್ರಹಿಸಿ ಬ್ಯಾನ್ ಮಾಡುವ ಶಿಫಾರಸು ಮಾಡಲಿ. ಕೇವಲ ಆರೋಪ-ಪ್ರತ್ಯಾರೋಪ ಮಾಡುತ್ತ ಕೂರುವುದು ಸರಿಯಲ್ಲ. ರಾಷ್ಟ್ರೀಯ ಪಕ್ಷಗಳ ಜಾಯಮಾನವೇ ಇದಾಗಿದೆ ಎಂದು ಹೇಳಿದರು.ಯಾವ ಮಾಧ್ಯಮಗಳನ್ನು ನೋಡಲಿ, ಯಾವ ಪತ್ರಿಕೆಗಳನ್ನು ನೋಡಲಿ ರಾಷ್ಟ್ರೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳೇ ಕಾಣುತ್ತವೆ. ಜನ ಇದರಿಂದ ರೋಸಿ ಹೋಗಿದ್ದಾರೆ. ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Comments