ರಾಜ್ಯಾದ್ಯಂತ ಬಿಪಿಎಲ್ ಕುಟುಂಬಗಳಿಗೆ ಕುರಿ, ಮೇಕೆ, ಕೋಳಿ ಭಾಗ್ಯ'..!

ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಪಶುಸಂಗೋಪನಾ ಸಚಿವ ಎ.ಮಂಜು, ಸದ್ಯಕ್ಕೆ ಪಶುಭಾಗ್ಯ ಯೋಜನೆ ಸೇರಿದಂತೆ ಕೆಲವು ಯೋಜನೆಗಳಡಿ ಹಲವರಿಗೆ ಈ ಸೌಲಭ್ಯ ದೊರೆಯುತ್ತಿದ್ದರೂ ಬಿಪಿಎಲ್ ಕುಟುಂಬಗಳಿಗೆ ವಿಸ್ತರಿಸಬೇಕೆಂಬುದು ನಮ್ಮ ಉದ್ದೇಶವಾಗಿದ್ದು, ಕುರಿ, ಮೇಕೆ, ಕೋಳಿಗಳ ಸಾಕಾಣಿಕಗೆ ಬಿಪಿಎಲ್ ಕುಟುಂಬಗಳಿಗೆ ನೆರವು ನೀಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮಾಂಸದ ಉತ್ಪಾದನೆ ಪ್ರಮಾಣ ಕಡಿಮೆ ಇದ್ದು, ಈ ಹಿನ್ನೆಲೆಯಲ್ಲಿ ಮಾಂಸ ಉತ್ಪಾದನೆ ಹೆಚ್ಚಿಸಲು ಕುರಿ, ಮೇಕೆ, ಕೋಳಿಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಕುರಿ ಮೇಕೆ, ಕೋಳಿ ಸಾಕಲು ಬಯಸುವ ಬಿಪಿಎಲ್ ಕುಟುಂಬಗಳಿಗೆ ಅವನ್ನು ಒದಗಿಸುವಂತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದರು. ರಾಜ್ಯದಲ್ಲಿ ಮಾಂಸಾಹಾರಿ ವ್ಯಕ್ತಿ ವಾರ್ಷಿಕ 11 ಕೆಜಿಯಷ್ಟು ಮಾಂಸ ಸೇವಿಸುತ್ತಾರೆ. ಆದರೆ ರಾಜ್ಯದಲ್ಲಿ ಮಾಂಸದ ಉತ್ಪಾದನೆ ತಲಾ ಕೇವಲ 3 ಕೆಜಿಯಷ್ಟಿದೆ ಎಂದು ವಿವರಿಸಿದರು. ಹೀಗಾಗಿ ಮನುಷ್ಯ ಬೇಡಿಕೆಯ ಪ್ರಮಾಣಕ್ಕಿಂತಲೂ ತಲಾ 8 ಕೆಜಿಗಳಷ್ಟು ಮಾಂಸದ ಕೊರತೆಯಿದ್ದು, ಹೆಚ್ಚುವರಿ ಅಗತ್ಯತೆ ಪೂರೈಸಲು ಹೊರರಾಜ್ಯಗಳಿಂದ ಕುರಿ, ಮೇಕೆ, ಕೋಳಿಗಳನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಇದನ್ನು ತಪ್ಪಿಸಲು ರಾಜ್ಯದಲ್ಲಿ ಕುರಿ, ಮೇಕೆ, ಕೋಳಿ ಸಾಕಲು ಬಯಸುವ ಬಿಪಿಎಲ್ ಕುಟುಂಬಗಳಿಗೆ ಒದಗಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಎರಡು ಕುರಿ, ಮೇಕೆ ಮತ್ತು ಹಲವು ಕೋಳಿಗಳನ್ನು ಒದಗಿಸಿದರೆ ಅವುಗಳನ್ನು ಪಾಲನೆ, ಪೋಷಣೆ ಮಾಡುವುದರ ಮುಖಾಂತರ ವರ್ಷಕ್ಕೆ 35 ರಿಂದ 40 ಸಾವಿರ ರೂ.ಗಳಷ್ಟು ಆದಾಯ ಗಳಿಸಬಹುದು ಎಂದು ವಿವರಿಸಿದರು.
Comments