ರಾಜ್ಯದ ವಿವಿಧೆಡೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಎಸಿಬಿ

ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಮೇಲೆ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮುಂದುವರೆಸಿದ್ದಾರೆ. ಎಸಿಬಿ ಅಧಿಕಾರಿ ಸುಬ್ರಮಣ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ನಗರದ ನಾಲ್ಕು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಎಸಿಬಿ ದಾಳಿ : ಬಿಬಿಎಂಪಿ ಕಂದಾಯ ಪರಿವೀಕ್ಷಕ ನರಸಿಂಹಲು, ಕೋರಮಂಗಲದ ಈಜಿಪುರದ ಕಂದಾಯ ಪರಿವೀಕ್ಷಕ ಸೇರಿದಂತೆ, ಬಿಬಿಎಂಪಿಯ ಸಹಾಯಕ ಇಂಜಿನಿಯರ್‌ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಬಿಬಿಎಂಪಿ ಕಂದಾಯ ಪರಿವೀಕ್ಷಕ ನರಸಿಂಹಲು ಬೊಮ್ಮನಹಳ್ಳಿ ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುವಾಗ ಹೆಚ್.ಎಸ್.ಆರ್ ಬಡಾವಣೆಗೆ ಹೊಂದಿಕೊಂಡಿದ್ದ ಎಳ್ಳುಕುಂಟೆಯ ಸರ್ವೇ ನಂಬರ್ 2/2 ಎಂಟು ಗುಂಟೆ ಬಿಡಿಎ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಖಾತಾ ಮಾಡಿಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಅಮಾನತ್ತಾಗಿದ್ದರು. ಮತ್ತೊಂದೆಡೆ ಬಿಡಿಎ ಉಪ ನಿರ್ದೇಶಕ ತ್ಯಾಗರಾಜ್ ಅವರ ಮನೆ ಮತ್ತು ಕಚೇರಿಗಳ ಮೇಲೂ ಎಸಿಬಿ ದಾಳಿ ನಡೆದಿದೆ. ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಮನೆ ಮತ್ತೊಂದೆಡೆ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ರಾಯಚೂರಿನಲ್ಲಿ ಎಸಿಬಿ ದಾಳಿ :ಬಳ್ಳಾರಿ ಎಸಿಬಿ ಅಧಿಕಾರಿ ತಂಡ ಬೆಳಗ್ಗೆ ಇಲ್ಲಿನ ನಗರಸಭೆ ಸ್ಯಾನಿಟರಿ ಇನ್ಸ್‌ಪೆಕ್ಟರ್ ಅಮರೇಶ ಮನೆ ಮೇಲೆ ದಾಳಿ ನಡೆಸಿದೆ. ಆದಾಯಕ್ಕಿಂತ ಹೆಚ್ಚಿಗೆ ಅಕ್ರಮ ಆಸ್ತಿ ಗಳಿಸಿರುವ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ರಾಯಚೂರು ನಗರದ ಗಂಗಾ ಪರಮೇಶ್ವರಿ ಕಾಲೋನಿಯಲ್ಲಿನ ಮನೆ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
ವಿಜಯಪುರದಲ್ಲಿಯೂ ದಾಳಿ: ನಗರದ ಬಾರಾಕುಟ್ರಿ ತಾಂಡಾ ಬಳಿ ಇರುವ ನೀರಾವರಿ ಇಲಾಖೆ ಎಂಜಿನಿಯರಿಂಗ್ ವಿಭಾಗದ ಸುಪರಿಂಟೆಂಡೆಂಟ್ ಸೋಮಪ್ಪ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.
ಗದಗದಲ್ಲಿ ಎಸಿಬಿ ಅಧಿಕಾರಿಗಳ ದಾಳಿ: ಜಿಲ್ಲೆ ನರಗುಂದ ಪಟ್ಟಣದಲ್ಲಿ ಎಸಿಬಿ ದಾಳಿ ನಡೆದಿದೆ. ಎಸಿಬಿ ಅಧಿಕಾರಿಗಳು ನರಗುಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ್ ಪಾಟೀಲ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಜೊತೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿರುವ ನಿವಾಸದ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ದಾಳಿಯ ವೇಳೆ ಅಧಿಕೃತ ದಾಖಲೆಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಲಾಗುತ್ತಿದೆ.
ದಾವಣಗೆರೆಯಲ್ಲೂ ಎಸಿಬಿ ದಾಳಿ : ಬೆಸ್ಕಾಂನ ಎಇಇ ಜಗದೀಶಪ್ಪ ಅವರ ಶಿವಕುಮಾರ ಬಡಾವಣೆಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ದಾವಣಗೆರೆಯಲ್ಲಿ ಮೂರು ಮನೆಗಳು, ಧಾರವಾಡದಲ್ಲಿ ಎರಡು ಸೈಟ್, ತುಮಕೂರಿನಲ್ಲಿ 1 ಸೈಟ್, ಬೆಂಗಳೂರಿನಲ್ಲಿ 1 ಸೈಟ್ ಹಾಗೂ ಹೊಸದುರ್ಗ ತಾಲೂಕು ಚಿಕ್ಕಮ್ಮನಹಳ್ಳಿಯಲ್ಲಿ 5 ಎಕರೆ ಜಮೀನು, ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರಿನಲ್ಲಿ 20 ಎಕರೆ ಜಮೀನು ಸೇರಿದಂತೆ ಕೋಟ್ಯಾಂತರ ರೂ. ಆಸ್ತಿ ಹೊಂದಿರುವ ಹಿನ್ನೆಲೆ ದಾಳಿ ನಡೆಸಲಾಗಿದೆ. ಎಸಿಬಿ ಎಸ್ಪಿ ವಂಶಿಕೃಷ್ಣ ಹಾಗೂ ಡಿಎಸ್‌ಪಿ ವಾಸುದೇವ ರಾವ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಗಳಿಸಿರುವ ಹಿನ್ನೆಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Comments