ಮೈಸೂರು ಅರಮನೆಯಲ್ಲಿ ಯದುವಂಶದ ಕುಡಿಗೆ ಶೀಘ್ರವೇ ನಾಮಕರಣ
ಯದುವಂಶದ ಕುಡಿಗೆ ಶೀಘ್ರದಲ್ಲೇ ನಾಮಕರಣ ಮಾಡಲಾಗುವುದು ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯದುವಂಶದ ಹೆಸರನ್ನು ಬಿಂಬಿಸುವಂತಹ ಸೂಕ್ತ ಹೆಸರನ್ನು ನಾಮಕರಣ ಮಾಡಲು ಈಗಾಗಲೇ ಹುಡುಕಾಟ ನಡೆಸಿದ್ದೇವೆ. 2-3 ತಿಂಗಳಲ್ಲಿ ನಾಮಕರಣ ಮಾಡಲಿದ್ದೇವೆ ಎಂದರು.
ನಾಮಕರಣ ಶಾಸ್ತ್ರವನ್ನು ಯಾವ ರೀತಿ ಮಾಡಬೇಕು ಎಂಬುದನ್ನು ಅಮ್ಮ ನಿರ್ಧರಿಸಲಿದ್ದಾರೆ. ಮೈಸೂರು ಅರಮನೆಯಲ್ಲೇ ನಾಮಕರಣ ಕಾರ್ಯಕ್ರಮ ಮಾಡಬೇಕೆಂಬುದು ನಮ್ಮ ಅಭಿಲಾಷೆ ಎಂದರು. 60 ವರ್ಷಗಳ ಬಳಿಕ ಮೈಸೂರು ರಾಜ ಮನೆತನದಲ್ಲಿ ಪುತ್ರ ಸಂತಾನ ಪ್ರಾಪ್ತಿಯಾಗಿರುವುದು ಎಲ್ಲರಿಗೂ ತುಂಬಾ ಸಂತೋಷವಾಗಿದೆ. ಮಗನೊಂದಿಗೆ ಇದ್ದು 2018ರ ಹೊಸ ವರ್ಷಾಚರಣೆ ಮಾಡಿದ್ದೇನೆ. ನಮಗಿದು ಸಂತಸದ ವರ್ಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಆತುರದ ನಿರ್ಧಾರ ಮಾಡಲ್ಲ: ರಾಜಕೀಯಕ್ಕೆ ಬರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಈ ಬಗ್ಗೆ ಆತುರದ ನಿರ್ಧಾರ ಮಾಡಲ್ಲ, ಯಾವ ರಾಜಕೀಯ ನಾಯಕರೂ ನನ್ನೊಂದಿಗೆ ಆ ಬಗ್ಗೆ ಚರ್ಚಿಸಿಲ್ಲ, ಜನರಿಗೆ ಒಳಿತಾಗಲಿದೆ ಎಂದರೆ ಮುಂದೆ ನೋಡೋಣ. ಸದ್ಯಕ್ಕೆ ನನಗೆ ಸಾಮಾಜಿಕ ಸೇವೆ, ಟ್ರಸ್ಟ್‌ಗಳ ಕೆಲಸ, ಬ್ಯುಸಿನೆಸ್ ಹೀಗೆ ಅನೇಕ ಕೆಲಸವಿದೆ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
Comments