ಇಂದು ರಾತ್ರಿ ಬಾನಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾನೆ ಮಹಾ ಚಂದ್ರ..!!

ಸೌರಮಂಡಲದ ವಿಸ್ಮಯಗಳಲ್ಲಿ ಸೂಪರ್‍ಮೂನ್ ಸಹ ಒಂದು. ಭೂಮಿಗೆ ಅತಿ ಸನಿಹವಾಗುವ ಚಂದ್ರ ತನ್ನ ಸಹಜ ಗಾತ್ರಕ್ಕಿಂತ ದೊಡ್ಡದಾಗಿ ಮತ್ತು ಅತ್ಯಂತ ಪ್ರಕಾಶಮಾನವಾಗಿ ಗೋಚರಿಸುವ ವಿದ್ಯಮಾನವೇ ಸೂಪರ್‍ಮೂನ್. ಹೊಸ ವರ್ಷದ ಮೊದಲ ತಿಂಗಳು ಜನವರಿಯಲ್ಲೇ ಮಹಾ ಶಶಾಂಕ ಬಾನಂಗಳದಲ್ಲಿ ಉಜ್ವಲ ಬೆಳಕು ಚೆಲ್ಲಲಿದ್ದಾನೆ.
ವಿಶ್ವದ ಹಲವೆಡೆ ಇಂದು ರಾತ್ರಿ ಕಾಣಿಸಿಕೊಳ್ಳುವ ಸೂಪರ್ ಮೂನ್ ಈ ತಿಂಗಳಾಂತ್ಯದಲ್ಲಿ ಜ.31ರಂದು ಮತ್ತೆ ದೊಡ್ಡ ಆಕಾರ ಮತ್ತು ಉಜ್ವಲತೆಯೊಂದಿಗೆ ಪ್ರತ್ಯಕ್ಷ ಆಗಲಿದ್ದಾನೆ. ಪೂರ್ಣ ಚಂದ್ರ ವಸುಂಧರೆಗೆ ತೀರಾ ಸಮೀಪ ಬಂದಾಗ ಸೂಪರ್‍ಮೂನ್ ವಿದ್ಯಮಾನ ಸಂಭವಿಸುತ್ತದೆ. ಇಳೆ ಬಳಿಗೆ ಬರುವುದರಿಂದ ತನ್ನ ಎಂದಿನ ಗಾತ್ರಕ್ಕಿಂತಲೂ ಶೇ.14ರಷ್ಟು ದೊಡ್ಡದಾಗಿ ಮತ್ತು ಶೇ.30ರಷ್ಟು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಹೇಳಿದೆ.
ಗೋವಾದಲ್ಲಿ ಸೂಪರ್‍ಮೂನ್ : ಈ ಸೂಪರ್‍ಮೂನ್ ಕರಾವಳಿ ರಾಜ್ಯ ಗೋವಾದಲ್ಲಿ ವಿಶೇಷವಾಗಿ ಗೋಚರಿಸಲಿದೆ. ಗೋವಾದಲ್ಲಿ ಹೊಸ ವರ್ಷದ ಸಂಭ್ರಮದ ಮರುದಿನ ಜ.2ರಂದು ಮಹಾ ಚಂದ್ರ ಕಾಣಿಸಿಕೊಳ್ಳಲಿದ್ದಾನೆ. ಅಲ್ಲದೇ ಜ.31ರಂದು ಪುನ: ತನ್ನ ಸೊಬಗನ್ನು ಪ್ರದರ್ಶಿಸಲಿದ್ದಾರೆ. ಈ ವಿದ್ಯಮಾನದಿಂದಾಗಿ ಕಡಲಿನಲ್ಲಿ ಅಸಹಜ ಉಬ್ಬರ-ಇಳಿತ ಮತ್ತು ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಗೋವಾ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
Comments