ನಾಳೆ ಹಿರಿಯ ನಾಗರಿಕರೊಂದಿಗೆ ಎಚ್ ಡಿಕೆ ನೇರ ಸಂವಾದ
ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಹಿರಿಯ ನಾಗರಿಕರ ಸಂವಾದ ಕಾರ್ಯಕ್ರಮವನ್ನು ನಾಳೆ ಬೆಳಿಗ್ಗೆ 10-30ಕ್ಕೆ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶ್ರೀ ಮಹಾಲಕ್ಷ್ಮೀ ಎಜ್ಯುಕೇಷನಲ್ ಟ್ರಸ್ಟ್ನ ವತಿಯಿಂದ ಆಯೋಜಿಸಲಾಗಿದೆ.ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಅಭಿಪ್ರಾಯ ಹಾಗೂ ಸಲಹೆ ಪಡೆಯಲು ಜೆಡಿಎಸ್ ತೀರ್ಮಾನಿಸಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಜ. 5ರಿಂದ ಪ್ರವಾಸ ಕೈಗೊಳ್ಳುವ ಮುನ್ನ ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಲು ಎಚ್.ಡಿ.ಕುಮಾರಸ್ವಾಮಿ ಉದ್ದೇಶಿಸಿದ್ದಾರೆ. ಅದಕ್ಕೂ ಮುನ್ನ ಇತ್ತೀಚೆಗೆ ದಲಿತ ನಾಯಕರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿ ಬೇಡಿಕೆ ಹಾಗೂ ಸಲಹೆ ಪಡೆದಿದ್ದ ಮಾದರಿಯಲ್ಲೇ ಕುಮಾರಸ್ವಾಮಿ ಈಗ ಹಿರಿಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಪಡೆಯಲು ಮುಂದಾಗಿದ್ದಾರೆ.
ಮಹಾಲಕ್ಷ್ಮೀ ಎಜುಕೇಷನ್ ಟ್ರಸ್ಟ್ ಹಾಗೂ ಜೆಡಿಎಸ್ ಬೆಂಗಳೂರು ಮಹಾನಗರ ಘಟಕವು ಜ.3ರಂದು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಿರಿಯ ನಾಗರಿಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿದೆ.ಈಗಾಗಲೇ ಜೆಡಿಎಸ್ ಘೋಷಿಸಿರುವಂತೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 3 ಸಾವಿರ ರೂ. ಹಾಗೂ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ಸಾವಿರ ರೂ. ಮಾಸಾಶನ ಘೋಷಣೆ ಮಾಡಿದೆ. ಅಲ್ಲದೆ, ನಾಡಿಗೆ ಸೇವೆ ಸಲ್ಲಿಸಿದ ಹಲವು ಹಿರಿಯ ನಾಗರಿಕರೊಂದಿಗೆ ನೇರ ಸಂವಾದ ನಡೆಸಿ, ನಾಡು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹಾಗೂ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದನೆ ಮಾಡುವ ಬಗ್ಗೆ ಮುಕ್ತ ಸಂವಾದ ನಡೆಸಲಾಗುತ್ತದೆ ಎಂದು ಜೆಡಿಎಸ್ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ತಿಳಿಸಿದ್ದಾರೆ.
ಹಿರಿಯ ನಾಗರಿಕರು ಹಲವು ಸಮಸ್ಯೆ ಎದುರಿಸುತ್ತಿದ್ದು, ಅವುಗಳಿಗೆ ಪರಿಹಾರ, ವೈದ್ಯಕೀಯ ನೆರವು, ಭದ್ರತೆಗಳ ಬಗ್ಗೆ ಸಮಾಲೋಚನೆ ನಡೆಸಿ ಸಲಹೆ ಪಡೆಯಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಜೊತೆಗೆ ರೈತರ ಸಮಸ್ಯೆ, ಕಾವೇರಿ, ಮಹದಾಯಿ ವಿವಾದಗಳು ಮೊದಲಾದ ಜ್ವಲಂತ ಸಮಸ್ಯೆಗಳ ಬಗ್ಗೆ ಹಿರಿಯ ನಾಗರಿಕರ ಸಲಹೆ ಪಡೆದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವುದರ ಜತೆಗೆ ಮುಂದೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈಗ ನೀಡುವ ಭರವಸೆ ಈಡೇರಿಸುವ ಕುರಿತಂತೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
Comments