ಸಿಎಂ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸವಾಲ್
ನೀರಾವರಿ ವಿಷಯದಲ್ಲಿ ಡೋಂಗಿ ವ್ಯವಹಾರ ಬಿಟ್ಟು ನನ್ನ ಜತೆ ಹೋರಾಟಕ್ಕೆ ಬರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸವಾಲು ಹಾಕಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಲ, ಜಲ ವಿಷಯದಲ್ಲಿ ದೇವೇಗೌಡ ಪಕ್ಷಾತೀತ ಹೋರಾಟಕ್ಕೆ ಸದಾ ಸಿದ್ದ. ಕಾವೇರಿ ಹೋರಾಟಕ್ಕೆ ಸಿದ್ದರಾಮಯ್ಯ ಕರೆದರು ಎಂಬ ಕಾರಣಕ್ಕೆ ನಾನು ಹೋಗಿಲ್ಲ. ಸ್ವಯಂ ಪ್ರೇರಿತವಾಗಿ ಹೋಗಿದ್ದೆ. ಕೃಷ್ಣಾ ನೀರಾವರಿ ಯೋಜನೆಯನ್ನು ರೂಪಿಸಿದವರು ಯಾರು? ದೆಹಲಿಗೆ ಹೋಗಿ ಅವನ್ನು ಅನುಷ್ಠಾನಗೊಳಿಸಿದವರು ಯಾರು? ದೇವೇಗೌಡರಾ, ಸಿದ್ದರಾಮಯ್ಯನಾ ಎಂದು ಖಾರವಾಗಿ ಪ್ರಶ್ನಿಸಿದರು.
ನೀರಾವರಿ ವಿಷಯದಲ್ಲಿ ಸಿದ್ದರಾಮಯ್ಯ ಅವರು ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಕಿಡಿಕಾರಿದರು. ಜೆಡಿಎಸ್-ಬಿಜೆಪಿ ನಡುವೆ ಚುನಾವಣೆ ಮೈತ್ರಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಕುರಿತು ಕೇಳಿ ಬರುತ್ತಿರುವ ಸುದ್ದಿಗಳು ಕಪೋಲಕಲ್ಪಿತ ಎಂದು ಸ್ಪಷ್ಟ ಪಡಿಸಿದ ಅವರು, ಜೆಡಿಎಸ್ ಪರವಾಗಿ ಜನರ ಒಲವಿದೆ. ಈ ಸಂದರ್ಭದಲ್ಲಿ ಗೊಂದಲ ಮೂಡಿಸಲು ಇಂತಹ ವದಂತಿಗಳನ್ನು ಹಬ್ಬಿಸಲಾಗುತ್ತಿದೆ.ನಟ ಸುದೀಪ್ ಅವರು ಜೆಡಿಎಸ್ ಸೇರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಕುಮಾರಸ್ವಾಮಿ ಜತೆ ಚರ್ಚೆ ಮಾಡಿದ್ದಾರೆ. ಸುದೀಪ್ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ವೈಕುಂಠ ಏಕಾದಶಿಯ ಅಂಗವಾಗಿ ತಿರುಪತಿ ಕ್ಷೇತ್ರದ ದರ್ಶನ ಪಡೆದು ಮರಳಿದ ಅವರು, ಮೈಸೂರಿಗೆ ವಿಮಾನ ನಿಲ್ದಾಣಕ್ಕೆ ಬಂದ ಗೌಡರು ಶ್ರೀರಂಗಪಟ್ಟಣದ ಆದಿರಂಗ, ಮಧ್ಯರಂಗ, ಅಂತ್ಯರಂಗ ದೇವರ ದರ್ಶನವನ್ನು ಕುಟುಂಬ ಸಮೇತರಾಗಿ ಪಡೆದರು.
Comments