ರೈಲು ಸೇವೆ ಹೆಚ್ಚಳಕ್ಕೆ ಕೇಂದ್ರ ಸಚಿವರಿಗೆ ದೇವೇಗೌಡರ ಮನವಿ

ಬೆಂಗಳೂರು-ಹಾಸನ-ಮಂಗಳೂರು ವಿಭಾಗಗಳ ನಡುವೆ ರೈಲುಗಳ ಸಂಚಾರ ಸೇವೆಗಳನ್ನು ಹೆಚ್ಚಿಸಬೇಕೆಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜಧಾನಿ ದೆಹಲಿಯಲ್ಲಿ ಇಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್‍ರನ್ನು ಭೇಟಿ ಮಾಡಿ ದೇವೇಗೌಡರು ಮನವಿ ಪತ್ರ ಸಲ್ಲಿಸಿದರು.
ಈ ವರ್ಷದ ಆರಂಭದಲ್ಲಿ ಬೆಂಗಳೂರು-ಹಾಸನ (ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ) ನಡುವೆ ಹೊಸ ಬ್ರಾಡ್‍ಗೇಜ್ ಮಾರ್ಗ ಉದ್ಘಾಟನೆಯಾಗಿದೆ. ಕೃಷಿ ಆಧಾರಿತ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ಮತ್ತು ಹಾಸನ ಜಿಲ್ಲೆಗಳ ಜನರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಿದೆ ಎಂದು ಗೌಡರು ಸಚಿವರಿಗೆ ತಿಳಿಸಿದರು. ಪ್ರಸ್ತುತ ಈ ಹೊಸ ಮಾರ್ಗದಲ್ಲಿ ಮೂರು ಎಕ್ಸ್‍ಪ್ರೆಸ್ ಮತ್ತು ಒಂದು ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿವೆ. ಇದು ಬಾಲಗಂಗಾಧರ ನಾಥ ನಗರ, ಶ್ರವಣಬೆಳಗೊಳ ಮತ್ತು ಅದರ ಆಚೆ ಇರುವ ಪವಿತ್ರ ಸ್ಥಳಗಳು ಮತ್ತು ಯಾತ್ರಾ ತಾಣಗಳಿಗೆ ಹೋಗುವ ಜನರಿಗೆ ಅನುಕೂಲವಾಗುತ್ತದೆ. ಆದಕಾರಣ ಈ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಗ್ರಹಿಸಿದರು.
ಈ ಮಾರ್ಗದಲ್ಲಿ ಮತ್ತಷ್ಟು ರೈಲುಗಳ ಸಂಚಾರವನ್ನು ಆರಂಭಿಸಿದರೆ ಈ ಭಾಗಗಳ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ರೈಲ್ವೆ ಸಚಿವರು ಇದನ್ನು ಪರಿಗಣಿಸಿ ಬೆಂಗಳೂರು-ಹಾಸನ ಹೊಸ ಮಾರ್ಗದ ನಡುವೆ ಹೆಚ್ಚಿನ ರೈಲು ಸಂಚಾರವನ್ನು ಆರಂಭಿಸಬೇಕು. ಚೆನ್ನೈಮತ್ತು ಮಂಗಳೂರು (ಹಾಸನ ಮತ್ತು ಬೆಂಗಳೂರು ಮಾರ್ಗವಾಗಿ) ನಡುವೆ ಎಕ್ಸ್‍ಪ್ರೆಸ್/ಸೂಪರ್‍ಫಾಸ್ಟ್ ರೈಲುಗಳನ್ನು ಆರಂಭಿಸಬೇಕು. ಇದರಿಂದ ಬಂದರು ನಗರಿಗಳ ನಡುವೆ ಅಂತರವೂ ಕಡಿಮೆಯಾಗುತ್ತದೆ ಹಾಗೂ ಸಂಪರ್ಕ ವೃದ್ದಿಯಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲಹೆ ಮಾಡಿದರು.
ಅದೇ ರೀತಿ ಬೆಂಗಳೂರು ಮತ್ತು ಕಾರವಾರ ನಡುವೆ (ಕುಣಿಗಲ್ ಮತ್ತು ಹಾಸನ ಮಾರ್ಗವಾಗಿ) ಪ್ರತ್ಯೇಕ ರೈಲು ಹಾಗೂ ಹಾಸನ ಮತ್ತು ಕುಣಿಗಲ್ ಮಾರ್ಗವಾಗಿ ಮೈಸೂರು ಮತ್ತು ಬೆಂಗಳೂರು ನಡುವೆ ರೈಲು ಸೇವೆಗಳನ್ನು ಹೆಚ್ಚಿಸಬೇಕು ಎಂದು ಅವರು ತಿಳಿಸಿದರು. ಮುಂದಿನ ವರ್ಷ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕಾಗಿ ಭಕ್ತರು ಮತ್ತು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು-ಹಾಸನ ಮತ್ತು ಹಾಸನ-ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರ ಕಲ್ಪಿಸಬೇಕು. ಬೆಳಗ್ಗೆ 5 ರಿಂದ ರಾತ್ರಿ 11ರವರೆಗೆ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪ್ರತಿದಿನ ಪ್ರತಿ ಗಂಟೆಗೊಮ್ಮೆ ಈ ರೈಲುಗಳು ಸಂಚರಿಸುವಂತಾಗಬೇಕೆಂದು ಎಚ್.ಡಿ.ದೇವೇಗೌಡರು ಸಲಹೆ ಮಾಡಿದ್ದಾರೆ.
Comments