ದೇಶದೆಲ್ಲೆಡೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ
ಸರ್ಕಾರಿ ತೈಲ ಕಂಪನಿಗಳು ದೆಹಲಿಯಲ್ಲಿ ಡೀಸೆಲ್ ಅನ್ನು ಲೀಟರ್ ಗೆ 59.31 ರುಪಾಯಿಗೆ ಮಾರಾಟ ಮಾಡಿದ್ದರೆ, ಕೋಲ್ಕತ್ತಾದಲ್ಲಿ 61.97 ಹಾಗೂ ಚೆನ್ನೈನಲ್ಲಿ 62.48 ರುಪಾಯಿಗೆ ಮಾರಲಾಗಿದೆ. ಮೂರೂಕಾಲು ವರ್ಷದಲ್ಲೇ ಇದು ಗರಿಷ್ಠ ಮಟ್ಟವಾಗಿದೆ. ಇನ್ನು ಮುಂಬೈನಲ್ಲಿ 62.75 ಇದ್ದು, ಕಳೆದ ಅಕ್ಟೋಬರ್ 3 ನಂತರದ ಹೆಚ್ಚಿನ ದರ ಇದಾಗಿದೆ.
ಅಂದಹಾಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ ಟಿ ಅಡಿಯಲ್ಲಿ ಇನ್ನೂ ತಂದಿಲ್ಲ. ಸ್ಥಳೀಯವಾಗಿ ಎಷ್ಟು ತೆರಿಗೆ ಹಾಕಲಾಗುತ್ತದೆ ಎಂಬ ಆಧಾರದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬೇರೆ ದರಗಳಿವೆ. ಯಾವಾಗ ಅಮೆರಿಕದಲ್ಲಿ ರಿಫೈನರಿಗಳನ್ನು ಮುಚ್ಚಿದ ನಂತರ ಪೆಟ್ರೋಲ್- ಡೀಸೆಲ್ ದರಗಳು ಏರುಮುಖವಾದಾಗ ಕೇಂದ್ರ ಸರಕಾರ ಪ್ರತಿ ಲೀಟರ್ ಡೀಸೆಲ್ ಹಾಗೂ ಪೆಟ್ರೋಲ್ ಗೆ 2 ರುಪಾಯಿ ಅಬಕಾರಿ ಸುಂಕ ಇಳಿಕೆ ಮಾಡಿತು.ಸದ್ಯದ ತೈಲ ಬೆಲೆ ಏರಿಕೆ ಕಾರಣದಿಂದ ಕೇಂದ್ರ ಸರಕಾರ ಇಳಿಸಿದ 2 ರುಪಾಯಿ ಸುಂಕದ ಲಾಭ ಗ್ರಾಹಕರಿಗೆ ಏನೇನೂ ಆಗಲಿಲ್ಲ. ಕೇಂದ್ರ ಸರಕಾರ ಮನವಿ ಮಾಡಿದ ಕಾರಣಕ್ಕೆ ಮಹಾರಾಷ್ಟ್ರ ಹಾಗೂ ಗುಜರಾತ್ ನಂಥ ರಾಜ್ಯಗಳು ಪೆಟ್ರೋಲ್ - ಡೀಸೆಲ್ ಮೇಲಿನ ಸ್ಥಳೀಯ ತೆರಿಗೆ, ವ್ಯಾಟ್ ಕಡಿಮೆ ಮಾಡಿದವು. ಆದ್ದರಿಂದ ಈ ರಾಜ್ಯಗಳಲ್ಲಿ ಬೆಲೆ ಏರಿಕೆ ಸ್ವಲ್ಪ ನಿಧಾನವಾಗಿದೆ.
ಸದ್ಯಕ್ಕೆ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ ಅತಿ ಹೆಚ್ಚಿನ ಸುಂಕ ಹಾಕುತ್ತಿರುವುದು ಮಹಾರಾಷ್ಟ್ರದ ಮುಂಬೈನಲ್ಲಿ 22.27 ರುಪಾಯಿ. ಇನ್ನು ಅತ್ಯಂತ ಕಡಿಮೆ ಸುಂಕ ಗುಜರಾತ್ ನಲ್ಲಿ 12.66 ರುಪಾಯಿ. ಇನ್ನು ಡೀಸೆಲ್ ಗೆ ಹೆಚ್ಚಿನ ತೆರಿಗೆ 14.64 ರುಪಾಯಿ ವಿಧಿಸುವುದು ಆಂಧ್ರದಲ್ಲಾದರೆ, ಅತ್ಯಂತ ಕಡಿಮೆ ಪಂಜಾಬ್ ನಲ್ಲಿ 8.58 ರುಪಾಯಿ. ಪೆಟ್ರೋಲಿಯಂನಿಂದ ರಾಜ್ಯಗಳಿಗೆ ದೊರಕುವುದು 1,89,587 ಕೋಟಿ ತೆರಿಗೆ, ಕೇಂದ್ರಕ್ಕೆ ದೊರಕುವುದು 2,73,502 ಕೋಟಿ ರುಪಾಯಿ ತೆರಿಗೆ. ಕೇಂದ್ರ ಹಾಗೂ ರಾಜ್ಯ ಸರಕಾರದ ತೆರಿಗೆ ಯಾವ ಪ್ರಮಾಣದಲ್ಲಿದೆ ಅಂದರೆ, ಪೆಟ್ರೋಲ್- ಡೀಸೆಲ್ ನ ಚಿಲ್ಲರೆ ದರದ ಅರ್ಧದಷ್ಟು ಮೊತ್ತ ತೆರಿಗೆಯೇ ಇದೆ. ಕಳೆದ ಆರು ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದ ಬೆಲೆ ಶೇ 42ರಷ್ಟು ಹೆಚ್ಚಳವಾಗಿ ಬ್ಯಾರಲ್ ಕಚ್ಚಾ ತೈಲದ ದರ 65 ಅಮೆರಿಕನ್ ಡಾಲರ್ ತಲುಪಿದೆ.
Comments