ಖ್ಯಾತ ಕವಿ ಮಿರ್ಜಾ ರವರಿಗೆ ಗೂಗಲ್ ಡೂಡಲ್ ಮೂಲಕ ಗೌರವ

ಮುಘಲರ ಕಾಲದಲ್ಲಿನ ಪ್ರಮುಖ ಉರ್ದು ಹಾಗೂ ಪರ್ಶಿಯನ್ ಭಾಷೆಯ ಕವಿಯಾಗಿದ್ದ ಮಿರ್ಜಾ ಘಾಲಿಬ್ ಅವರ ಪೂರ್ಣ ಹೆಸರು ಮಿರ್ಜಾ ಅಸಾದುಲ್ಲಾ ಬೇಗ್ ಖಾನ್. ಆಗ್ರಾದಲ್ಲಿ ಡಿಸೆಂಬರ್ 27, 1797ರಲ್ಲಿ ಜನಿಸಿದ್ದ ಘಾಲಿಬ್, ತಮ್ಮ 11ನೆ ವಯಸ್ಸಿನಿಂದಲೇ ಕವಿತೆಗಳನ್ನು ರಚಿಸಲು ಆರಂಭಿಸಿದ್ದರು.
ಅವರು ಉರ್ದು ಘಜಲ್ ಗಳಿಗೆ ಖ್ಯಾತರಾಗಿದ್ದರು. ಪರ್ಶಿಯನ್ ಭಾಷೆಯಲ್ಲಿನ ಅವರ ಸಾಧನೆಗಿಂತಲೂ ಉರ್ದು ಭಾಷೆಯಲ್ಲಿಯೇ ಅವರು ಹೆಚ್ಚಿನ ಸಾಧನೆ ಮತ್ತು ಮನ್ನಣೆ ಗಳಿಸಿದ್ದರು. ಆಗಿನ ಮೇಲ್ವರ್ಗದ ಮುಸ್ಲಿಮರ ಸಂಪ್ರದಾಯದಂತೆ ತಮ್ಮ 13ನೆ ವಯಸ್ಸಿಗೆ ಮದುವೆಯಾದ ಘಾಲಿಬ್ ನಂತರ ದಿಲ್ಲಿಗೆ ಸ್ಥಳಾಂತರಗೊಂಡಿದ್ದರು. ಜೀವನ ಒಂದು ನೋವಿನ ಹೋರಾಟ ಹಾಗೂ ಈ ನೋವು ಬದುಕಿನೊಂದಿಗೆ ಅಂತ್ಯವಾಗುವುದೆಂಬ ಮಾತು ಅವರ ಕವಿತೆಗಳಲ್ಲಿ ವ್ಯಕ್ತವಾಗುತ್ತಿತ್ತು.
ಮುಘಲರ ಕಾಲದ ಕೊನೆಯ ಮಹೋನ್ನತ ಕವಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಘಾಲಿಬ್ ಅವರ ಕವಿತೆಗಳು ವಿವಿಧ ಭಾಷೆಗಳಲ್ಲಿ ಅನುವಾದಗೊಂಡಿದೆ. 1850ರಲ್ಲಿ ಆಗಿನ ಮುಘಲ್ ದೊರೆ ಬಹಾದುರ್ ಶಾ ಝಫರ್-2 ಘಾಲಿಬ್ ಗೆ ದಾಬಿರ್-ಉಲ್-ಮುಲ್ಕ್ ಬಿರುದು ನೀಡಿ ಸನ್ಮಾನಿಸಿದ್ದನು. ದೊರೆಯ ಹಿರಿಯ ಪುತ್ರ ಫಕ್ರುದ್ದೀನ್ ಮಿರ್ಜಾಗೆ ಕವನ ರಚಿಸಲು ಕಲಿಸುತ್ತಿದ್ದ ಶಿಕ್ಷಕರೂ ಅವರಾಗಿದ್ದರು. ಮುಘಲ ಆಸ್ಥಾನದ ಇತಿಹಾಸಕಾರರಾಗಿಯೂ ಅವರನ್ನು ನೇಮಿಸಲಾಗಿತ್ತು. ಮುಂದೆ ಮುಘಲರ ಆಡಳಿತ ಕೊನೆಗೊಳ್ಳುವ ಹಂತಕ್ಕೆ ತಲುಪಿದಾಗ ಮಿರ್ಜಾ ಘಾಲಿಬ್ ಬಹಳ ಕಷ್ಟದ ಜೀವನ ನಡೆಸಲಾರಂಭಿಸಿದ್ದರು. ದಿಲ್ಲಿಯಲ್ಲಿ ಫೆಬ್ರವರಿ 15, 1869ರಲ್ಲಿ ಅವರು ಮೃತಪಟ್ಟ ನಂರ ಅವರು ಹಳೆದಿಲ್ಲಿಯಲ್ಲಿ ವಾಸವಾಗಿದ್ದ ನಿವಾಸ ಘಾಲಿಬ್ ಸ್ಮಾರಕವಾಗಿದೆ. ಘಾಲಿಬ್ ಕಿ ಹವೇಲಿ ಎಂದೇ ಈ ಕಟ್ಟಡ ಖ್ಯಾತವಾಗಿದೆ.
Comments