ಪ್ರವಾಸಿಗರಿಗೆ ನೆರವಾಗಲು ಸ್ಪಾನರ್ ಹಿಡಿದ ಎಸ್‍ಪಿ ಅಣ್ಣಾಮಲೈ

ಎಸ್‍ಪಿ ಅಣ್ಣಾಮಲೈ ತಮ್ಮ ಕಾರ್ಯವೈಖರಿಯಿಂದಲೇ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಅಧಿಕಾರಿ ಪ್ರವಾಸಿಗರಿಗೂ ಆಪದ್ಭಾಂಧವರೆನಿಸಿದ್ದಾರೆ. ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಅಪಘಾತ ಅಥವಾ ವಾಹನಗಳು ಕೆಟ್ಟು ನಿಂತಾಗ ಸಹಾಯ ಹಸ್ತ ಚಾಚುವವರೇ ವಿರಳ. ಅಂತಹದರಲ್ಲಿ ಬೆಂಗಳೂರಿನಿಂದ ಪ್ರವಾಸಕ್ಕೆಂದು ಆಗಮಿಸಿದ್ದವರ ಕಾರು ಮಾರ್ಗ ಮಧ್ಯೆ ಕೆಟ್ಟು ನಿಂತಾಗ ಅದನ್ನು ಕಂಡ ಎಸ್‍ಪಿ ಅಣ್ಣಾಮಲೈ ಸ್ವತಃ ಸಹಾಯಕ್ಕೆ ಮುಂದಾಗಿದ್ದಲ್ಲದೆ, ವಾಹನ ರಿಪೇರಿಗೂ ಕೈ ಹಾಕಿ ಸ್ಪಾನರ್ ಹಿಡಿದು ಟಯರ್ ಬಿಚ್ಚುವ ಕೆಲಸಕ್ಕೂ ನೆರವಾದರು.
ಪೊಲೀಸ್ ಅಧಿಕಾರಿಯ ಕಾರ್ಯವೈಖರಿ ಅಚ್ಚರಿಯೆನಿಸಿದರೂ ಸತ್ಯ. ಕಳೆದ ರಾತ್ರಿ ಚಿಕ್ಕಮಗಳೂರಿನಿಂದ ಶೃಂಗೇರಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಕಾರೊಂದು ಮತ್ತಾವರ ಗ್ರಾಮದ ಬಳಿ ಪಂಕ್ಚರ್ ಆಗಿ ನಿಂತಿತ್ತು. ಈ ವೇಳೆ ಕೊಪ್ಪದಿಂದ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ಅಣ್ಣಾಮಲೈ ಅವರು ಇದನ್ನು ಗಮನಿಸಿ ವಾಹನ ಕೆಟ್ಟು ನಿಂತಿದ್ದ ವಿಷಯ ತಿಳಿದು ಅವರ ನೆರವಿಗೆ ಧಾವಿಸಿದರು. ಟಯರ್ ಬಿಚ್ಚಲು ಸ್ಪಾನರ್ ಹಿಡಿದು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗದೆ ಹೋದಾಗ ತಮ್ಮ ಸಿಬ್ಬಂದಿ ದೂರವಾಣಿ ಕರೆ ಮಾಡಿ ಕರೆಸಿ ಕಾರನ್ನು ರಿಪೇರಿಗೆ ಕಳುಹಿಸಿ ಕಾರಿನಲ್ಲಿದ್ದ ಪ್ರವಾಸಿಗರನ್ನು ತಮ್ಮ ಕಾರಿನಲ್ಲೇ ನಗರಕ್ಕೆ ಕರೆತಂದರು.
ನಡುರಸ್ತೆಯಲ್ಲಿ ಕಾರು ಕೆಟ್ಟಿದ್ದರಿಂದ ರಸ್ತೆಯ ಸುತ್ತಮುತ್ತ ಮರಗಳೇ ಆವರಿಸಿ ಕಾಡಿನಂತೆ ಕಾಣುತ್ತಿದ್ದ ರಸ್ತೆಯಲ್ಲಿ ಆತಂಕದಿಂದ ನಿಂತಿದ್ದೆವು. ಈ ಸಮಯದಲ್ಲಿ ಎಸ್‍ಪಿ ಅಣ್ಣಾಮಲೈ ಅವರ ಸಹಾಯದಿಂದ ನಮಗೆ ಬಹಳಷ್ಟು ಅನುಕೂಲವಾಯಿತು ಎಂದು ವಾಹನ ಮಾಲೀಕ ಸಂತಸ ವ್ಯಕ್ತಪಡಿಸಿದರು .
Comments