ಮಹಾಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರಿಂದ ಅನುದಾನ ಬಂದಿಲ್ಲ
ಶ್ರವಣಬೆಳಗೋಳದಲ್ಲಿ 2018ರ ಫೆ.7ರಿಂದ ಆರಂಭಗೊಳ್ಳಲಿರುವ ಮಹಾಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರಿಂದ ಈವರೆಗೆ ಯಾವುದೇ ಅನುದಾನ ಬಂದಿಲ್ಲ, ಅದಾಗ್ಯೂ ರಾಜ್ಯ ಸರ್ಕಾರದ ಅನುದಾನದಿಂದ ಸಿದ್ದತಾ ಕಾರ್ಯಗಳು ನಡೆದಿದ್ದು, ಶೇ.80ರಷ್ಟು ಸಿದ್ಧತೆ ಪೂರ್ಣಗೊಂಡಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪಶುಸಂಗೋಪನಾ ಸಚಿವ ಎ. ಮಂಜು ತಿಳಿಸಿದ್ದಾರೆ.
ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ 175 ಕೋಟಿ ರೂ. ಅನುದಾನ ಒದಗಿಸಿದೆ. ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿಯವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ನಾನೂ ಸಹ ಇತ್ತಿಚಿಗೆ ಕೇಂದ್ರ ಸಂಸ್ಕೃತಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಆದರೆ, ಈವರೆಗೆ ಯಾವುದೇ ಉತ್ತರ ಬಂದಿಲ್ಲ. ಆದರೆ, ಆರ್ಥಿಕ ವೆಚ್ಚ ಭರಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಹೇಳಿದರು.
ಒಟ್ಟು 487 ಎಕರೆ ಪ್ರದೇಶದಲ್ಲಿ 12 ಉಪನಗರಗಳನ್ನು ನಿರ್ಮಿಸಲಾಗುತ್ತಿದೆ. 87 ಕೋಟಿ ರೂ. ವೆಚ್ಚದಲ್ಲಿ ಸಂಪರ್ಕ ರಸ್ತೆಗಳಗಳ ನಿರ್ಮಾಣ ಮಾಡಲಾಗುತ್ತಿದೆ. ಮಹಾಮಸ್ತಕಾಭಿಷೇಕ ನಡೆಯುವ 7ರಿಂದ 15ದಿನಗಳಲ್ಲಿ 35 ರಿಂದ 40 ಲಕ್ಷ ಜನ ಬಂದು ಹೋಗುವ ನಿರೀಕ್ಷೆಯಿದೆ. 22 ಸಾವಿರ ಮಂದಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು ಮತ್ತಿತರರ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸ ನಡೆದಿದೆ. ಕೇಂದ್ರದಿಂದ ಹಣ ಬರಬಹುದು ಎಂಬ ನಿರೀಕ್ಷೆಯಿದೆ. ಬಂದರೆ ಅದನ್ನೂ ಸಹ ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
Comments