ನಟಿ ನಯನತಾರಾ ಫೋಟೋ ನೋಡಿ ಫಿದಾ ಆದ ಕುಖ್ಯಾತ ಪಾತಕಿ

ಬಿಹಾರದಲ್ಲಿ ಕುಖ್ಯಾತ ಪಾತಕಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಭಾವಿ ರಾಜಕೀಯ ಮುಖಂಡರೊಬ್ಬರ ದುಬಾರಿ ಮೊಬೈಲ್ ಕಳವು ಮಾಡಿದ್ದ ಆತ, ಅದರ ಮೂಲಕವೇ ತನ್ನ ಕುಕೃತ್ಯ ಮುಂದುವರೆಸುತ್ತಿರುವುದನ್ನು ಪತ್ತೆ ಹಚ್ಚಿದ್ದ ಪೊಲೀಸರು ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಫೋಟೋ ಬಳಸುವ ಮೂಲಕ ಆತನನ್ನು ಹನಿಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.
ದರ್ಭಾಂಗಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪಾತಕಿ ಮಹಮ್ಮದ್ ಹಸ್ನೇನ್ ಎಂಬಾತ ರಾಜಕೀಯ ಮುಖಂಡ ಸಂಜಯ್ ಕುಮಾರ್ ಮಹತೋ ಎಂಬವರ ದುಬಾರಿ ಬೆಲೆಯ ಮೊಬೈಲ್ ಕಳವು ಮಾಡಿದ್ದು, ಈ ಸಂಬಂಧ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾಲ್ ರೆಕಾರ್ಡ್ಸ್ ಪರಿಶೀಲಿಸಿದ ವೇಳೆ ಮೊಬೈಲ್ ಬಳಕೆಯಾಗುತ್ತಿರುವುದು ಕಂಡು ಬಂದಿತ್ತು. ಲೊಕೇಶನ್ ಆಧಾರದ ಮೇಲೆ ಮಹಮ್ಮದ್ ನನ್ನು ಬಂಧಿಸಲು ಹಲವು ಬಾರಿ ಯತ್ನಿಸಿದರೂ ಫಲ ನೀಡಿರಲಿಲ್ಲ. ಆಗ ಹನಿಟ್ರ್ಯಾಪ್ ಗೆ ಮೊರೆ ಹೋದ ಪೊಲೀಸರು ಇದಕ್ಕಾಗಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಧುಬಾಲಾ ದೇವಿಯವರನ್ನು ನಿಯೋಜಿಸಿದ್ದರು.
ತಮ್ಮ ಗುರುತು ಬಿಟ್ಟುಕೊಡದ ಮಧುಬಾಲಾ ದೇವಿ ಪಾತಕಿಗೆ ಆಗಾಗ ಕರೆ ಮಾಡುತ್ತಿದ್ದುದ್ದಲ್ಲದೆ ಆತನನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಮೊದಲು ಈ ಕರೆಗಳ ಕುರಿತು ಅಷ್ಟೇನೂ ತಲೆಕೆಡಿಸಿಕೊಳ್ಳದ ಮಹಮ್ಮದ್ ಹಸ್ನೇನ್ ಫೋಟೋ ಕಳಿಸುವಂತೆ ಹೇಳಿದ್ದ. ಆಗ ಮಧುಬಾಲಾ ದೇವಿ, ನಟಿ ನಯನತಾರಾ ಫೋಟೋವನ್ನು ಕಳುಹಿಸಿದ್ದರು. ಇದನ್ನು ನೋಡಿ ಫಿದಾ ಆದ ಮಹಮ್ಮದ್ ಹಸ್ನೇನ್ ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದ. ಇದಕ್ಕಾಗೇ ಕಾದು ಕುಳಿತಿದ್ದ ಪೊಲೀಸರು ಮಧುಬಾಲಾರ ಮೂಲಕ ಆತನನ್ನು ಕರೆಸಿಕೊಂಡು ಅರೆಸ್ಟ್ ಮಾಡಿದ್ದಾರೆ.
Comments