ರಾಜಕೀಯದ ಆಫ್ ದಿ ರೆಕಾರ್ಡ್ ಸ್ಟೋರಿ ಅನಾವರಣಗೊಳಿಸಲಿದೆ ಗೌಡರ 'ಶಿಖರಾರೋಹಣ'
ಜನತಾದಳ ಅಧಿಕಾರಕ್ಕೆ ಬಂದಾಗ ದೇವೇಗೌಡರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ನಡೆದ ಯತ್ನ ಬಹಿರಂಗಗೊಂಡಿದ್ದು, ಅಂದು ಪಕ್ಷದಲ್ಲಿ ನಡೆದ ಹುನ್ನಾರ ಗೌಡರ ಸಾಧನೆಯ 'ಶಿಖರಾರೋಹಣ' ಕೃತಿಯಲ್ಲಿ ಅನಾವರಣಗೊಂಡಿದೆ. ಈ ಕೃತಿ ಇಂದು ಲೋಕಾರ್ಪಣೆಯಾಗಲಿದೆ.
ಅಂದು, ಜನತಾದಳ ಅಧಿಕಾರಕ್ಕೆ ಬಂದಾಗ ದೇವೇಗೌಡ ಸಿಎಂ ಆಗಲು ಈಗಿನ ಸಚಿವ ಸಂಪುಟದ ಸದಸ್ಯ ಆರ್.ವಿ ದೇಶಪಾಂಡೆ ಅಡ್ಡಗಾಲು ಹಾಕಿದ್ದರು ಎನ್ನುವ ಮಾಹಿತಿ ಕೃತಿಯಲ್ಲಿ ಉಲ್ಲೇಖಿಸಿದ್ದು, ಕೃತಿ ಬಿಡುಗಡೆಗೂ ಮುನ್ನವೇ ಈ ಮಾಹಿತಿ ಜಗಜ್ಜಾಹೀರಾಗಿದೆ. ರಾಮಕೃಷ್ಣ ಹೆಗಡೆ ಒಲ್ಲದ ಮನಸ್ಸಿನಿಂದಲೇ ದೇವೇಗೌಡ ಸಿಎಂ ಆಗಲು ಒಪ್ಪಿದಾಗ ತಾಲೂಕಿಗೇ ನಾಯಕರಾಗಲು ನಾಲಾಯಕ್ ಆಗಿರುವ ವ್ಯಕ್ತಿ, ರಾಜ್ಯಕ್ಕೆ ನಾಯಕರಾಗಲು ಹೇಗೆ ಸಾಧ್ಯ ಎಂದು ದೇಶಪಾಂಡೆ ಪ್ರಶ್ನಿಸಿದ್ದರಂತೆ. ಆಗ ನಡೆಸಿದ ಗೌಡರ ಪರ ಪ್ರತಿಭಟನೆ ವೇಳೆ ಹೆಗಡೆ, ಬೊಮ್ಮಾಯಿ ಜೊತೆ ದೇಶಪಾಂಡೆ ಕೂಡ ಪೆಟ್ಟಿನ ರುಚಿ ನೋಡಬೇಕಾಯಿತು ಎಂದು ಬರೆಯಲಾಗಿದೆ.
ಪ್ರಾಂತ್ಯ ಭೂಪಟ ಗೊತ್ತಿಲ್ಲದ ವ್ಯಕ್ತಿ ಪ್ರಧಾನಿಯಾಗಿದ್ದು, ದೌರ್ಭಾಗ್ಯ ಎಂದು ರಾಮಕೃಷ್ಣ ಹೆಗಡೆ ಟೀಕಿಸಿದ್ದು, ಸೇರಿದಂತೆ ರಾಜ್ಯ ರಾಜಕೀಯದಲ್ಲಿನ ಸಾಕಷ್ಟು ಘಟನಾವಳಿಗಳನ್ನು ಕೃತಿ ನೆನಪಿಸಲಿದೆ. ಗೌಡರ ಹೇಳಿಕೆಯನ್ನು ಒಳಗೊಂಡ ಅವರ ಸಾಧನೆಯ ಸಂಗತಿಗಳು ಕೃತಿಯಲ್ಲಿ ಇರಲಿವೆ. ಆದರೆ, ಇದು ದೇವೇಗೌಡರ ಆತ್ಮಚರಿತ್ರೆ ಅಲ್ಲ. ಅವರ ಹೇಳಿಕೆಗಳ ಆಧಾರದಲ್ಲಿ ಸಿದ್ಧಪಡಿಸಿದ ಕೃತಿ ಮಾತ್ರ ಎಂದು ದೇವೇಗೌಡರ ಆಪ್ತ ಹಾಗೂ ಜೆಡಿಎಸ್ ಶಾಸಕ ವೈಎಸ್‌ವಿ ದತ್ತಾ ಮಾಹಿತಿ ನೀಡಿದ್ದಾರೆ.
Comments