ಬಿಜೆಪಿ ಮುಖಂಡರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಎಚ್ ಡಿಕೆ
ವಿಜಯಪುರದಲ್ಲಿ ದಲಿತ ಸಮುದಾಯದ ವಿದ್ಯಾರ್ಥಿನಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ, ಕೊಲೆಗೈದಿರುವ ಘಟನೆ ಅತ್ಯಂತ ಹೇಯ ಎಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈಗ ಬಿಜೆಪಿ ನಾಯಕರು ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಗರದ ಜೆ.ಪಿ.ಭವನದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸರಕಾರದಲ್ಲಿ ಪೋಲಿ, ಪುಂಡರಿಗೆ ಭಯ ಭಕ್ತಿ ಇಲ್ಲದಂತಾಗಿದೆ. ಕಾರವಾರದಲ್ಲಿ ಸಣ್ಣ ಅಪಘಾತದ ಘಟನೆಯನ್ನು ಕೋಮುಗಲಭೆಗೆ ತಿರುಗಿಸಲಾಯಿತು. ಈ ಬಾಲಕಿಯ ವಿಚಾರದಲ್ಲಿ ಬಿಜೆಪಿ ನಾಯಕರು ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ಸದ್ಯಕ್ಕೆ ಎಲ್ಲಿಯೂ ಬೆಂಕಿ ಹಚ್ಚಲಿಲ್ಲ. ಈ ಘಟನೆಯನ್ನು ಕೋಮುವಾದಕ್ಕೆ ಪರಿವರ್ತನೆ ಮಾಡಲಿಲ್ಲ ಎಂದು ಹೇಳಿದರು.ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಅದೇ ಜಿಲ್ಲೆಯಲ್ಲಿದ್ದರೂ ವಿದ್ಯಾರ್ಥಿನಿಯ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳದೆ ಇರುವುದು ಬೇಜವಾಬ್ದಾರಿತನದ ವರ್ತನೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎಚ್.ಡಿ.ಕುಮಾರಸ್ವಾಮಿ, ಸರಕಾರಿ ಕಾರ್ಯಕ್ರಮಗಳ ಹೆಸರಿನಲ್ಲಿ ಜನತೆಯ ತೆರಿಗೆ ಹಣವನ್ನು ಬಳಸಿಕೊಂಡು ಪಕ್ಷ ಸಂಘಟನೆಗೆ ಮುಖ್ಯಮಂತ್ರಿ ಹೊರಟಿದ್ದಾರೆ. ಜನಸಾಮಾನ್ಯರ ಪ್ರಾಣಕ್ಕಿಂತ, ಇವರ ಪಾಲಿಗೆ ಕಾರ್ಯಕ್ರಮಗಳೇ ಮಹತ್ವದ್ದು ಎಂದು ಟೀಕಿಸಿದರು.
ಮಹಿಳೆಯರು, ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮ ಕುರಿತು ವರದಿ ನೀಡುವಂತೆ ವಿ.ಎಸ್.ಉಗ್ರಪ್ಪ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯು ನಾಲ್ಕು ವರ್ಷಗಳಾದರೂ ವರದಿ ನೀಡಿಲ್ಲ ಎಂದು ಅವರು ಹೇಳಿದರು.ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಸಮಸ್ಯೆ ಇತ್ಯರ್ಥಪಡಿಸಲು ಬಿಜೆಪಿಯವರು ಕಣ್ಣು ತೆರೆದಿದ್ದಾರೆ. ರಾಜ್ಯ ವಿಧಾನಸಭೆಯ ಚುನಾವಣೆಗೆ ಇನ್ನು ಮೂರೂವರೆ ತಿಂಗಳು ಇದೆ. ಆ ಭಾಗದ ಜನತೆಗೆ ನ್ಯಾಯ ಒದಗಿಸಬೇಕೆಂದು ಈಗಲಾದರೂ ಅವರಿಗೆ ಜ್ಞಾನೋದಯವಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ, ಗದಗ, ನವಲಗುಂದ, ನರಗುಂದದಲ್ಲಿ ಮಹಾದಾಯಿಗಾಗಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ದಬ್ಬಾಳಿಕೆ ನಡೆಸಿ, ಅವರನ್ನು ಜೈಲಿಗೆ ಕಳುಹಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರಮೋದಿಯನ್ನು ಹತ್ತಾರು ಬಾರಿ ಭೇಟಿ ಮಾಡಿ, ಸಮಸ್ಯೆ ಬಗೆಹರಿಸಲು ಇರುವ ಮಾರ್ಗಗಳ ಕುರಿತು ಚರ್ಚೆ ಮಾಡಿದ್ದರು ಎಂದು ಕುಮಾರಸ್ವಾಮಿ ತಿಳಿಸಿದರು.
ಇತ್ತೀಚೆಗೆ ಮುಕ್ತಾಯಗೊಂಡ ಅಧಿವೇಶನದಲ್ಲಿ ಬೆಂಗಳೂರಿಗೆ ಕಾವೇರಿ ನದಿ ನೀರನ್ನು ಹಂಚಿಕೆ ಮಾಡುವ ಸಂಬಂಧ ದೇವೇಗೌಡರು ತಮ್ಮ ಅಧಿಕಾರವಧಿಯಲ್ಲಿ ಹೊರಡಿಸಿದ್ದ ಆದೇಶ ಪ್ರತಿಯನ್ನು ಸದನದಲ್ಲಿ ಸರಕಾರ, ಸ್ಪೀಕರ್ ಹಾಗೂ ವಿಪಕ್ಷ ನಾಯಕ ಜಗದೀಶ್ ಶೆಟ್ಟೆರ್ ನಾವು ನೀಡಿದೆವು ಎಂದು ಕುಮಾರಸ್ವಾಮಿ ತಿಳಿಸಿದರು.ನರೇಂದ್ರಮೋದಿ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬರಬೇಕಿದೆ. ಆದುದರಿಂದ, ಈಗ ಕಣ್ಣು ತೆರೆದಿದ್ದಾರೆ. ನಾಳೆ ಹುಬ್ಬಳ್ಳಿಯಲ್ಲಿ ಬಿಜೆಪಿಯವರ ಪರಿವರ್ತನಾ ಯಾತ್ರೆಯ ಸಮಾವೇಶ ನಡೆಯಬೇಕಲ್ಲ. ಭಗವಂತ ಕೊನೆಯ ಹಂತದಲ್ಲಾದರೂ ಅವರಿಗೆ ಸದ್ಭುದ್ಧಿ ನೀಡಿದ್ದಾರೆ ಎಂದುb ಕುಮಾರಸ್ವಾಮಿ ಹೇಳಿದರು.
Comments