ಉದ್ಯೋಗಿಗಳಿಗೆ ಗುಡ್ ನ್ಯೂಸ್! ಗ್ರಾಚ್ಯುಟಿ ಮಿತಿ 20 ಲಕ್ಷ, ತಾಯ್ತನದ ರಜಾ 26 ವಾರಕ್ಕೆ ಏರಿಕೆ

ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತದ ಮೇಲಿದ್ದ ಮಿತಿಯನ್ನು ಸರಕಾರ 10 ಲಕ್ಷದಿಂದ 20 ಲಕ್ಷ ರುಪಾಯಿಗೆ ಏರಿಕೆ ಮಾಡಿದೆ. ದ ಪೇಮಂಟ್ ಆಫ್ ಗ್ರಾಚ್ಯುಟಿ ಆಕ್ಟ್ (ತಿದ್ದುಪಡಿ) ಮಸೂದೆ 2017 ಅನ್ನು ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವರ್ ಸದನದಲ್ಲಿ ಮಂಡಿಸಿದರು.
ವಿರೋಧ ಪಕ್ಷಗಳು ಈ ವೇಳೆ ಘೋಷಣೆ ಕೂಗಿದವು. ಪ್ರತಿಯಾಗಿ ಬಿಜೆಪಿಯವರೂ ಘೋಷಣೆ ಹಾಕಿದರು. ಪೇಮಂಟ್ ಆಫ್ ಗ್ರಾಚ್ಯುಟಿ ಆಕ್ಟ್ 1972ರ ಅನ್ವಯ ಕಾರ್ಖಾನೆ, ಗಣಿಗಾರಿಕೆ, ಪ್ಲಾಂಟೇಷನ್, ಬಂದರು, ರೈಲ್ವೆ ಕಂಪನಿ, ಮಳಿಗೆ ಅಥವಾ ಇನ್ಯಾವುದೇ ಸಂಸ್ಥೆಗಳಿಗೆ ಇದು ಅನ್ವಯ ಆಗುತ್ತದೆ.ಅಂಥಲ್ಲಿ ಐದು ವರ್ಷ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಿದ್ದರೆ ಗ್ರಾಚ್ಯುಟಿ ನೀಡಬೇಕು. ಅಂದಹಾಗೆ ಈ ಗ್ರಾಚ್ಯುಟಿ ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಅದಕ್ಕೊಂದು ಸೂತ್ರವಿದೆ. ಆ ಉದ್ಯೋಗಿ ಒಟ್ಟಾರೆಯಾಗಿ ಅಲ್ಲಿ ಎಷ್ಟು ವರ್ಷ ಕಾರ್ಯ ನಿರ್ವಹಿಸಿದರು ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ವರ್ಷಕ್ಕೆ ಹದಿನೈದು ದಿನದಂತೆ ಸಂಬಳ ಲೆಕ್ಕ ಹಾಕಿ, ಅವರು ಎಷ್ಟು ವರ್ಷ ಕೆಲಸ ನಿರ್ವಹಿಸಿರುತ್ತಾರೋ ಅಷ್ಟು ವರ್ಷವನ್ನು ಗುಣಿಸಲಾಗುತ್ತದೆ. ಬಂದ ಮೊತ್ತವೇ ಗ್ರಾಚ್ಯುಟಿ.
2010ರಲ್ಲಿ ಗ್ರಾಚ್ಯುಟಿ ಮೊತ್ತಕ್ಕೆ ಗರಿಷ್ಠ 10 ಲಕ್ಷ ಎಂದು ಮಿತಿ ಹಾಕಲಾಯಿತು. ಆ ನಂತರ ಏರುತ್ತಿರುವ ಹಣದುಬ್ಬರ, ವೇತನ ಮತ್ತಿತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಖಾಸಗಿ ಹಾಗೂ ಸರಕಾರಿ ವಲಯಗಳಲ್ಲೇ ಗ್ರಾಚ್ಯುಟಿ ಮಿತಿಯಲ್ಲೇ ಏರಿಕೆ ಮಾಡಲಾಗುತ್ತಿದೆ. ಕಾಯ್ದೆಗೆ ತಿದ್ದುಪಡಿ ತರುವ ಬದಲು ಅಧಿಸೂಚನೆ ಹೊರಡಿಸಿದರೆ, ಆಯಾ ಸಮಯಕ್ಕೆ ತಕ್ಕಂತೆ ಆ ಮಿತಿಯನ್ನು ಮುಂದಿನ ವೇತನ ಆಯೋಗಗಳು ಶಿಫಾರಸು ಮಾಡಬಹುದು ಎಂದು ಕೂಡ ಹೇಳಲಾಗಿದೆ.
Comments