ಹಳಿಯಾಳ ಪಿಎಸ್‍ಐ ಪತ್ನಿ ಆತ್ಮಹತ್ಯೆಗೆ ಶರಣು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಿಎಸ್‍ಐ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪಿಎಸ್‍ಐ ಮಲ್ಲಪ್ಪ ಎಸ್ ಹೂಗಾರ ಅವರ ಪತ್ನಿ ವಿಜಯಲಕ್ಷ್ಮಿ ಹೂಗಾರ(28) ಆತ್ಮಹತ್ಯೆ ಮಾಡಿಕೊಂಡವರು. ರಾತ್ರಿ ಪಾಳಿ ಮುಗಿಸಿ ಬೆಳಗ್ಗೆ ಪಿಎಸ್‍ಐ ಮನೆಗೆ ವಾಪಾಸ್ಸಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 7.30ರ ಸಮಯಕ್ಕೆ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಶರಣಾಗಿರಬಹುದೆಂದು ತಿಳಿದುಬಂದಿದೆ.
ಪಿಎಸ್‍ಐ ಮಲ್ಲಪ್ಪ ಎಸ್ ಹೂಗಾರ ಮತ್ತು ವಿಜಯಲಕ್ಷ್ಮಿ ಅವರಿಗೆ 6 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಲ್ಲಪ್ಪ ಅವರಿಗೆ ಮಂಗಳವಾರ ನೈಟ್ ಶಿಫ್ಟ್ ಕೆಲಸ ಇತ್ತು. ಹೀಗಾಗಿ ಅವರು ಇಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಪತ್ನಿ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದನನ್ನು ಕಂಡ ಪಿಎಸ್‍ಐ ಕಿರುಚಾಡಿದ್ದಾರೆ. ಪಿಎಸ್‍ಐ ಕೂಗುವ ಧ್ವನಿ ಕೇಳಿ ಪಕ್ಕದ ಕ್ವಾಟ್ರಸ್‍ನಲ್ಲಿದ್ದ ಸಿಪಿಐ ಧಾವಿಸಿದ್ದು, ಕೂಡಲೇ ವಿಜಯಲಕ್ಷ್ಮಿ ಅವರನ್ನು ನೇಣಿನಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಸರ್ಕಾರಿ ಆಸ್ಪತ್ರೆಗೆ ವಿಧಾನಪರಿಷತ್ ಸದಸ್ಯ ಎಸ್.ಎಲ್ ಘೋಟ್ನೆಕರ, ಮಾಜಿ ಶಾಸಕ ಸುನೀಲ ಹೆಗಡೆ, ತಹಶೀಲ್ದಾರ ವಿದ್ಯಾಧರ ಗುಳಗುಳೆ ಭೇಟಿ ನೀಡಿದ್ದಾರೆ.
Comments