ಉಪಚುನಾವಣೆಗೂ ಮುನ್ನ ಟಿಟಿವಿ ಬಣದಿಂದ ಜಯಲಲಿತಾ ಆಸ್ಪತ್ರೆಯಲ್ಲಿರುವ ವಿಡಿಯೋ ಬಿಡುಗಡೆ

ತಮಿಳುನಾಡಿನ ಆರ್ಕೆ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮುನ್ನಾದಿನ ಎಐಎಡಿಎಂಕೆಯ ದಿನಕರನ್ ಬಣ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೃಶ್ಯವನ್ನು ಬುಧವಾರ ಬಿಡುಗಡೆ ಮಾಡಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದ ಜಯಲಲಿತಾ ಆರ್ಕೆ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಎದೆನೋವಿನ ಕಾರಣಕ್ಕೆ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ನ್ಯಾಯಾಂಗ ಆಯೋಗ ತನಿಖೆ ನಡೆಸುತ್ತಿದೆ.
''ಈ ದೃಶ್ಯವನ್ನು ಹೇಗೆ ಚಿತ್ರೀಕರಿಸಲಾಗಿದೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ಜಯಲಲಿತಾ ಐಸಿಯುನಿಂದ ಹೊರ ಬಂದ ಬಳಿಕ ಅವರ ಆಪ್ತೆ ವಿ.ಕೆ. ಶಶಿಕಲಾ ದೃಶ್ಯವನ್ನು ಸೆರೆ ಹಿಡಿದಿದ್ದರು. ಟಿಟಿವಿ ದಿನಕರನ್ ಅಥವಾ ಶಶಿಕಲಾರನ್ನು ಸಂಪರ್ಕಿಸದೇ ಈ ವಿಡಿಯೋವನ್ನು ನಾನು ಬಿಡುಗಡೆ ಮಾಡುತ್ತಿದ್ದೇನೆ. ಎಐಎಡಿಎಂಕೆ ಒಂದು ಬಣ ಜಯಲಲಿತಾರನ್ನು ಆಸ್ಪತ್ರೆಗೆ ಸೇರಿಸಿರುವ ಬಗ್ಗೆ ಪ್ರಶ್ನೆ ಎತ್ತಿದ್ದವು. ಎಲ್ಲ ರಹಸ್ಯಗಳಿಗೆ ತೆರೆ ಎಳೆಯಲು ಬಯಸಿದ್ದೇನೆ'' ಎಂದು ಶಾಸಕ ವೆಟ್ರಿವೆಲ್ ಹೇಳಿದ್ದಾರೆ.
ಜಯಲಲಿತಾರ ಸಾವಿನ ಸಂದೇಹವನ್ನು ತಿಳಿಗೊಳಿಸುವ ಯತ್ನವಾಗಿ ದಿನಕರನ್ ಬಣ ಉಪ ಚುನಾವಣೆಯ ಮುನ್ನಾದಿನ ಜಯಲಲಿತಾ ಜ್ಯೂಸ್ ಕುಡಿಯುತ್ತಿರುವ ದೃಶ್ಯವನ್ನು ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ.
Comments