ನಾಳೆ ಬೆಂಗಳೂರಲ್ಲಿ ಬೆಳಗ್ಗೆಯಿಂದ ಆಟೋಗಳು ಸಿಗಲ್ಲ

ಆಟೋ ಫೈನಾನ್ಸ್ ಕಂಪನಿಗಳು ಕಾನೂನುಬಾಹಿರವಾಗಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿರುವ ಬೆಂಗಳೂರು ಆಟೋ ಚಾಲಕರ ಸಂಘ ಸಂಸ್ಥೆಗಳ ಒಕ್ಕೂಟ ನಾಳೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಬೆಳಗ್ಗೆ 11.30ಕ್ಕೆ ಪುರಭವನದ ಬಳಿ ಪ್ರತಿಭಟನೆ ನಡೆಯಲಿದೆ. ಆಟೋ ಫೈನಾನ್ಸ್ ಕಂಪನಿಗಳು ಆಟೋ ಖರೀದಿಸುವ ಚಾಲಕರಿಗೆ ವಾರ್ಷಿಕ ಶೇ.14 ಬಡ್ಡಿ ವಿಧಿಸಬೇಕು ಎಂದು ಸರ್ಕಾರ ಸೂಚಿಸಿದೆ. ಆದರೆ, ಇದನ್ನು ಪರಿಗಣಿಸದೆ ಕಾನೂನು ಬಾಹಿರವಾಗಿ ಫೈನಾನ್ಸ್ ಕಂಪನಿಯವರು ಶೇ.28 ರಿಂದ ಶೇ.40 ಬಡ್ಡಿ ವಿಧಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಒಂದು ವೇಳೆ ಆಟೋ ಚಾಲಕರು ನಿಗದಿತ ಬಡ್ಡಿ ನೀಡದಿದ್ದರೆ ಆಟೋಗಳನ್ನು ಹರಾಜು ಹಾಕುತ್ತಿದ್ದಾರೆ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆ ಮೂಲಗಳು ತಿಳಿಸಿವೆ.
ಸಾಲದ ಕಂತುಗಳನ್ನು ಕನಿಷ್ಠ 3 ತಿಂಗಳು ಕಟ್ಟದಿದ್ದರೆ ಸಾಲ ಮರುಪಾವತಿ ಕೋರಿ ಎಚ್ಚರಿಕೆ ಪತ್ರ ನೀಡಿ ನಂತರ ನ್ಯಾಯಾಲಯದ ಆದೇಶದಂತೆ ಆಟೋ ರಿಕ್ಷಾ ವಶಪಡಿಸಿಕೊಳ್ಳಬೇಕು. ಹಾಗೆಯೇ ಆಟೋಗಳನ್ನು ಹರಾಜು ಮಾಡುವ ಮುನ್ನ ಹರಾಜು ಪ್ರಕ್ರಿಯೆ ಕುರಿತು ಮಾಹಿತಿ ನೀಡಬೇಕು. ಆದರೆ, ಫೈನಾನ್ಸ್ ಕಂಪನಿಗಳು ನಿಯಮಗಳನ್ನು ಗಾಳಿಗೆ ತೂರಿ, ಆಟೋಗಳನ್ನು ವಶಪಡಿಸಿಕೊಳ್ಳುತ್ತಿವೆ. ಇದರಿಂದ ಆಟೋ ಚಾಲಕರ ಕುಟುಂಬ ಬೀದಿಗೆ ಬೀಳುವಂತಾಗಿದೆ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ಆಟೋ ವ್ಯತ್ಯಯ : ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ ಎಂದು ತಿಳಿಸಲಾಗಿದ್ದು, ನಗರದ ಹಲವೆಡೆ ನಾಳೆ ಬೆಳಗಿನ ಸಮಯದಲ್ಲಿ ಆಟೋಗಳ ಸಂಚಾರ ಲಭ್ಯತೆ ವಿರಳವಾಗುವ ಸಾಧ್ಯತೆಯಿದೆ.
Comments