ಪ್ರೀತಿಯಲ್ಲಿ ಬಿದ್ದ ನಂತ್ರ ಗೊತ್ತಾದ ಅಚ್ಚರಿ ಸಂಗತಿ
ಅದೃಷ್ಟ ಮತ್ತು ಹಣೆಬರಹವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಅನ್ನೋ ಮಾತಿದೆ. ಮುಂಬೈನ ಈ ಯುವ ಜೋಡಿಯ ಬದುಕಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. 2015ರಲ್ಲಿ ಸಿದ್ಧಾಂತ್ ಹಾಗೂ ದಿವ್ಯ ಮೊದಲ ಬಾರಿ ಭೇಟಿಯಾಗಿದ್ದರು. ಕೆಲಸದ ವಿಷಯಕ್ಕೆ ಶುರುವಾದ ಸಂಭಾಷಣೆ ಪರಸ್ಪರರನ್ನು ಮತ್ತಷ್ಟು ಸನಿಹಕ್ಕೆ ತಂದಿತ್ತು. ಇಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ಇಬ್ಬರ ವಿಚಾರಧಾರೆ, ಮನಸ್ಥಿತಿ ಒಂದೇ ತೆರನಾಗಿದ್ದಿದ್ದರಿಂದ ಪ್ರೀತಿಯಲ್ಲಿ ಬೀಳಲು ಹೆಚ್ಚು ಸಮಯ ಬೇಕಾಗಲಿಲ್ಲ.
ಅವಳನ್ನೇ ಮದುವೆಯಾಗಬೇಕೆಂದು ಸಿದ್ಧಾಂತ್ ನಿರ್ಧರಿಸಿದ್ದ. ಹೆತ್ತವರಿಗೂ ದಿವ್ಯಾಳನ್ನು ಪರಿಚಯಿಸಿ ತಮ್ಮಿಬ್ಬರ ಪ್ರೀತಿ ವಿಷಯವನ್ನು ಹೇಳಿದ್ದ. ಆಗ ಇಂಟ್ರೆಸ್ಟಿಂಗ್ ವಿಚಾರವೊಂದು ಬೆಳಕಿಗೆ ಬಂದಿತ್ತು. ಸಿದ್ಧಾಂತ್ ಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ಅದರಲ್ಲೂ ಫುಟ್ಬಾಲ್ ಅಂದ್ರೆ ಪಂಚಪ್ರಾಣ. ಹೀಗೆ ಬಾಲ್ಯದ ಬಗ್ಗೆ ಮಾತನಾಡುತ್ತಿದ್ದಾಗ ತಾವಿಬ್ಬರೂ ಒಂದೇ ವಯಸ್ಸಿನವರು ಅನ್ನೋದು ಗೊತ್ತಾಯ್ತು. ಒಂದೇ ವರ್ಷ ಪದವಿ ಮುಗಿಸಿದ್ರು. ಅಚ್ಚರಿ ಅಂದ್ರೆ ಒಂದೇ ಶಾಲೆಯಲ್ಲಿ ಓದಿದ್ದರು. ಶಾಲಾ ದಿನಗಳ ಫೋಟೋ ನೋಡಿದಾಗ ಇಬ್ಬರೂ ಬೆರಗಾಗಿದ್ದರು. ಒಂದೇ ಶಾಲೆ, ಒಂದೇ ಕ್ಲಾಸ್ ಹಾಗೂ ಒಂದೇ ವಿಭಾಗದಲ್ಲಿ ಸಿದ್ಧಾಂತ್ ಹಾಗೂ ದಿವ್ಯ ಓದಿದ್ದರು. ಈಗ ಮತ್ತೆ ಇಬ್ಬರೂ ಒಂದಾಗಿರೋದು ನಿಜಕ್ಕೂ ಖುಷಿ ಕೊಟ್ಟಿದೆ ಎನ್ನುತ್ತಾರೆ ಈ ಪ್ರೇಮಿಗಳು. ಸಹಪಾಠಿಗಳು ಈಗ ಸಂಗಾತಿಗಳಾಗ್ತಿರೋದು ವಿಶೇಷ.
Comments