‘ನವ ಕರ್ನಾಟಕ’ ಯಾತ್ರೆಗೆ ಅದ್ಧೂರಿ ಚಾಲನೆ

ಇಲ್ಲಿನ ಬಸವ ಕಲ್ಯಾಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ ನವ ಕರ್ನಾಟಕ ಯಾತ್ರೆಗೆ ಅದ್ಧೂರಿ ಸ್ವಾಗತ ದೊರೆಯಿತು. ಬಸವ ಕಲ್ಯಾಣಕ್ಕೆ ಹೆಲಿಪ್ಯಾಡ್‍ನಲ್ಲಿ ಬಂದಿಳಿದ ಮುಖ್ಯಮಂತ್ರಿಯವರನ್ನು ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಅಪಾರ ಅಭಿಮಾನಿಗಳು ಬೈಕ್ ರ‍್ಯಾಲಿ ಹಾಗೂ ಭಾರೀ ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕೆಗೆ ಕರೆದೊಯ್ದರು. ಬಸವ ಕಲ್ಯಾಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ನೆರವೇರಿಸುವುದರ ಮೂಲಕ ಮುಖ್ಯಮಂತ್ರಿಗಳು ತಮ್ಮ ಒಂದು ತಿಂಗಳ ಪ್ರವಾಸಕ್ಕೆ ಚಾಲನೆ ನೀಡಿದರು.
ಇದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಮಾಲಾರ್ಪಣೆ ಮಾಡಿದರು. ಬಸವ ಕಲ್ಯಾಣದ ಅನುಭವ ಮಂಟಪದ ಉದ್ಘಾಟನೆ ಮಾಡಿದರು. ಸುಮಾರು 264 ಕೋಟಿ ರೂ.ಗಳ ಕಾಮಗಾರಿಗೆ ಸಿಎಂ ಚಾಲನೆ ನೀಡಿದರು. ನಂತರ ಮಾತನಾಡಿದ ಪೌರಾಡಳಿತ ಸಚಿವ ಈಶ್ವರ ಖಂಡ್ರೆಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಿನಿಂದ ಅಭಿವೃದ್ಧಿ ಪರ್ವ ಆರಂಭವಾಗಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟವರು ಮುಖ್ಯಮಂತ್ರಿ ಸಿದ್ದರಾಮಯ್ಯವರು ಎಂದು ಬಣ್ಣಿಸಿದರು. ಹಿಂದೆ ರಾಜ್ಯದಲ್ಲಿ ಬಹಳಷ್ಟು ದುರಾಡಳಿತ, ಅಕ್ರಮಗಳು ನಡೆದಿವೆ. ನಮ್ಮದು ಹಗರಣ ಮುಕ್ತ ಸರ್ಕಾರವಾಗಿದೆ. ಮತ್ತೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಅಹಿಂದ ವರ್ಗದವರಿಗಷ್ಟೆ ಅಲ್ಲ, ಎಲ್ಲ ವರ್ಗದ ಜನರಿಗೂ ಕಾರ್ಯಕ್ರಮಗಳನ್ನು ರೂಪಿಸಿ ನಮ್ಮ ಸರ್ಕಾರ ಅನುಷ್ಠಾನಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ವರ್ಗದವರನ್ನೂ ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಿದ್ದಾರೆ ಎಂದು ಹೇಳಿದರು.ಮೇ 13 ಬಸವ ಜಯಂತಿಯಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಇಂದು 13ನೆ ತಾರೀಖಿನಂದೇ ಸಾಧನಾ ಸಂಭ್ರಮವನ್ನು ಬಸವ ಕಲ್ಯಾಣದಿಂದ ಪ್ರಾರಂಭಿಸುತ್ತಿದ್ದೇವೆ. ಸರ್ವರಿಗೂ ಸಮಪಾಲು-ಸಮಬಾಳು ಎಂಬುದು ನಮ್ಮ ಮುಖ್ಯಮಂತ್ರಿಗಳ ಧೋರಣೆಯಾಗಿದೆ ಎಂದು ಅವರು ಹೇಳಿದರು.
Comments