‘ದಲಿತರ ನಡಿಗೆ ಕುಮಾರಣ್ಣನ ಕಡೆಗೆ’ ಸಮಾವೇಶದಲ್ಲಿ ಏನೆಲ್ಲ ಚರ್ಚೆಯಾಯಿತು ಗೊತ್ತಾ?

ಜೆಡಿಎಸ್‍ಗೆ ಎಸ್‍ಸಿ/ಎಸ್‍ಟಿ ವಿಭಾಗದ ವತಿಯಿಂದ ದಲಿತರ ನಡಿಗೆ ಕುಮಾರಣ್ಣನ ಕಡೆಗೆ ಎಂಬ ಹೆಸರಿನಲ್ಲಿ ಎಸ್‍ಸಿ/ಎಸ್‍ಟಿ ಕಾರ್ಯಕರ್ತರ ಮಹಾ ಸಮಾವೇಶವನ್ನು ಇಂದು ಅರಮನೆ ಮೈದಾನದಲ್ಲಿ ನಡೆಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕುಗಳು ಸೇರಿದಂತೆ ಎಲ್ಲೆಡೆಯಿಂದ ಎಸ್‍ಸಿ/ಎಸ್‍ಟಿ ಕಾರ್ಯಕರ್ತರು ತಂಡೋಪತಂಡವಾಗಿ ಆಗಮಿಸಿ ಶಕ್ತಿಪ್ರದರ್ಶನ ಮಾಡಿದರು.
ಅರಮನೆ ಮೈದಾನದ ತುಂಬೆಲ್ಲ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಪರ ಘೋಷಣೆಗಳನ್ನು ಕೂಗಿದರು. ಮತ್ತೆ ಕೆಲ ಕಾರ್ಯಕರ್ತರು ಜೆಡಿಎಸ್ ಬಾವುಟದೊಂದಿಗೆ ಬೈಕ್‍ನಲ್ಲಿ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಂಡರು.ಜೆಡಿಎಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಡಿದ ಸಾಧನೆಗಳನ್ನು ತಿಳಿಸಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಜನವಿರೋಧಿ ಧೋರಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿಯವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ದಲಿತರ ಕಲ್ಯಾಣಕ್ಕಾಗಿ ಕೈಗೊಂಡ ಕಾರ್ಯಗಳು, ಜನಸಂಖ್ಯೆಗನುಗುಣವಾಗಿ ಜಾರಿಗೊಳಿಸಿದ ಕಾಯ್ದೆ ಇನ್ನಿತರ ಎಲ್ಲಾ ಕೆಲಸಗಳ ಬಗ್ಗೆ ತಿಳಿಸಿಕೊಡಲಾಯಿತು.
ದಲಿತರ ಸಂಕಷ್ಟ ದೂರಾಗಲು ಜೆಡಿಎಸ್ ಸಾಕಷ್ಟು ಶ್ರಮಿಸಿದೆ. ಇಂದಿನ ಸರ್ಕಾರಗಳು ಅಂತಹ ಯಾವುದೇ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಲು ಹಿಮ್ಮೆಟ್ಟಿವೆ ಎಂಬ ಆರೋಪ ಕೇಳಿ ಬಂದವು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜೆಡಿಎಸ್ ಎಸ್‍ಸಿ/ಎಸ್‍ಟಿ ಘಟಕದ ಅಧ್ಯಕ್ಷ ಅನ್ನದಾನಿ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ಬಿ.ಬಿ.ನಿಂಗಯ್ಯ, ಅಲ್ಕೋಡ್ ಹನುಮಂತಪ್ಪ, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಕುಪೇಂದ್ರ ರೆಡ್ಡಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಕಾಂತರಾಜು, ಮಾಜಿ ಸಚಿವರು, ಶಾಸಕರು, ಬಿಬಿಎಂಪಿ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.
Comments