ಕಾನೂನು ಹೋರಾಟದಲ್ಲಿ ಗೆದ್ದ ಕೆಎಸ್‌ಒಯು
ಯುಜಿಸಿ ನಿಯಮ ಉಲ್ಲಂಘನೆ ಆರೋಪ ಹೊತ್ತು ಮಾನ್ಯತೆ ಕಳೆದುಕೊಂಡಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಎರಡು ವಾರದೊಳಗೆ ಮಾನ್ಯತೆ ನೀಡುವಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಮಾನ್ಯತೆಗಾಗಿ ಮುಕ್ತ ವಿವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಕೆಎಸ್ಒಯು ಪರ ವಾದ ಮಂಡಿಸಿದ ವಕೀಲರು 2017-18ನೇ ಸಾಲಿಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಅವಧಿ ಪೂರ್ಣಗೊಂಡಿದೆ ಎಂಬ ಕಾರಣಕ್ಕೆ ತಿರಸ್ಕರಿಸಿದೆ. ಆದರೆ, ದೇಶದ ನೂರಾರು ವಿವಿಗಳಿಗೆ ಅವಧಿ ಮುಗಿದ ನಂತರವೂ ಮಾನ್ಯತೆ ನೀಡಿ ನಮ್ಮ ಮನವಿಯನ್ನು ಮಾತ್ರ ತಿರಸ್ಕರಿಸಿದೆ ಎಂದು ದೂರಿದರು.
ವಾದ ಆಲಿಸಿದ ನ್ಯಾ. ಬಿ.ವಿ ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇತರ ವಿವಿಗಳಿಗೆ ಅವಧಿ ಮೀರಿದ ಬಳಿಕವೂ ಮಾನ್ಯತೆ ನೀಡಬಹುದಾದರೆ ಕೆಎಸ್ಒಯುಗೆ ಏಕೆ ನೀಡಲು ಸಾಧ್ಯವಿಲ್ಲ ಎಂದು ಯುಜಿಸಿ ಪರ ವಕೀಲರನ್ನು ಪ್ರಶ್ನಿಸಿತು. ಕೆಎಸ್‌ಒಯು ಮನವಿ ತಿರಸ್ಕರಿಸಲು ಯುಜಿಸಿ ಅಧಿಕಾರಿಗಳು ನೀಡಿರುವ ಕಾರಣ ಸಮರ್ಪಕವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ತಾಂತ್ರಿಕೇತರ ಕೋರ್ಸ್‌ಗಳಿಗೆ ಎರಡು ವಾರದಲ್ಲಿ ಮಾನ್ಯತೆ ನೀಡುವಂತೆ ವಿಶ್ವವಿದ್ಯಾಲಯ ಧನವಿನಿಯೋಗ ಆಯೋಗಕ್ಕೆ(ಯುಜಿಸಿ) ಹೈಕೋರ್ಟ್ ನಿರ್ದೇಶಿಸಿತು.
ಯಾವುದೇ ಅಧ್ಯಯನ ಕೇಂದ್ರಗಳಲ್ಲದೇ ನೇರವಾಗಿ ವಿಶ್ವವಿದ್ಯಾಲಯದಲ್ಲಿ ದಾಖಲಾಗುವ ತಾಂತ್ರಿಕೇತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ 2017-18ನೇ ಸಾಲಿಗೆ ಮಾನ್ಯತೆ ನೀಡುವಂತೆ ಯುಜಿಸಿಗೆ ಸೂಚಿಸಿದೆ. ಹೈಕೋರ್ಟ್ ಆದೇಶದಿಂದ ಲಕ್ಷಾಂತರ ವಿದ್ಯಾರ್ಥಿಗಳು ನಿರಾಳವಾಗಿದ್ದು, ವಿವಿ ಮುಚ್ಚುವ ರಾಜ್ಯ ಸರ್ಕಾರದ ಪ್ರಸ್ತಾಪ ಹಾಗೂ ವಿದ್ಯಾರ್ಥಿಗಳ ಆತಂಕ ಅಂತ್ಯವಾಗಿದೆ.
Comments