ಸುದೀಪ್ ವಿರುದ್ಧ ಭಾರತಿ ವಿಷ್ಣುವರ್ಧನ್ ಅಸಮಾಧಾನ
ಸಾಹಸ ಸಿಂಹ ವಿಷ್ಣುವರ್ಧನ ಅವರ ಸಮಾಧಿಯನ್ನು ಮೈಸೂರಿಗೆ ಸ್ಥಳಾಂತರಿಸಬಾರದು ಎಂದು ಚಿತ್ರನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಆದರೆ ಸುದೀಪ್ ವಿರುದ್ಧ ಸಿಡಿಮಿಡಿಗೊಂಡಿರುವ ವಿಷ್ಣು ಪತ್ನಿ ಭಾರತೀ ವಿಷ್ಣುವರ್ಧನ್, ಮೈಸೂರಿನಲ್ಲೇ ಸ್ಮಾರಕ ಇರಲಿ ಎಂದು ಪ್ರತಿಪಾದಿಸಿದ್ದಾರೆ.
ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಸುದೀಪ್, ವಿಷ್ಣು ಸ್ಮಾರಕವನ್ನು ಎಲ್ಲಿ ಬೇಕಾದರೂ ನಿರ್ಮಿಸಲಿ. ಆದರೆ, ಸಮಾಧಿಯನ್ನು ಸ್ಥಳಾಂತರಿಸುವುದು ಬೇಡವೆಂದು ಮನವಿ ಮಾಡಿಕೊಂಡಿದ್ದಾರೆ. ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ವಿಷ್ಣುವರ್ಧನ ಸಮಾಧಿಯನ್ನು ಪುಣ್ಯಭೂಮಿ ಎಂದು ಅಭಿವೃದ್ಧಿ ಪಡಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಸಮಾಧಿ ಸ್ಥಳವನ್ನು ಕನ್ನಡ ಚಿತ್ರರಂಗವೇ ಖರೀದಿಸಲಿದೆ. ಹೀಗಾಗಿ ಸ್ಥಳಾಂತರ ಬೇಡ ಎಂದು ಮನವಿ ಮಾಡಿಕೊಂಡಿದ್ದೇನೆ. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು. ಆದರೆ, ಸುದೀಪ್ ಮುಖ್ಯಮಂತ್ರಿಯನ್ನು ಭೇಟಿಯಾಗಿರುವುದಕ್ಕೆ ವಿಷ್ಣುವರ್ಧನ ಪತ್ನಿ ಭಾರತಿ ಸಿಡಿಮಿಡಿಗೊಂಡಿದ್ದಾರೆ.
ಸುದೀಪ್ ಮುಖ್ಯಮಂತ್ರಿಯನ್ನು ಭೇಟಿಯಾಗಿರುವ ವಿಷಯ ನನಗೆ ಗೊತ್ತಿಲ್ಲ. ಜತೆಗೆ ಸುದೀಪ್ ನನ್ನ ಜೊತೆ ಯಾವುದೇ ವಿಷಯವನ್ನು ಚರ್ಚಿಸಿಲ್ಲ. ಬೆಂಗಳೂರಿನಲ್ಲಿ ಸ್ಮಾರಕ ಬೇಡ ಎಂದು ಈಗಾಗಲೇ ನಿರ್ಧರಿಸಲಾಗಿದೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ ಭರವಸೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಅಲ್ಲದೇ 2 ಕೋಟಿ ರೂಪಾಯಿ ಹಣವನ್ನೂ ಸರ್ಕಾರ ನೀಡಿದೆ ಎಂದು ಹೇಳಿದ್ದಾರೆ. ಇಲ್ಲಿ ಹಣದ ಸಮಸ್ಯೆಯಿಲ್ಲ. ಸುದೀಪ್ ವಾಸ್ತವ ಅರಿತುಕೊಳ್ಳಬೇಕು. ಹಣದ ಕೊರತೆಯಿದ್ದರೆ ನಮ್ಮ ಕುಟುಂಬವೇ ಭರಿಸುತ್ತಿತ್ತು. ಸ್ಮಾರಕದ ಸಮಸ್ಯೆ ಏನಿದೆ ಎಂದು ಅವರಿಗೆ ಗೊತ್ತಿಲ್ಲ. ಯಾರ್ಯಾರು ಬಂದು ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತಾರೋ ನನಗೆ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Comments