ಎಚ್ ಡಿಕೆ ಗೆ ಅಲ್ಪಸಂಖ್ಯಾತರ ಅಖಂಡ ಬೆಂಬಲ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಮಹದಾಸೆ ಹೊಂದಿರುವ ಜೆಡಿಎಸ್ ತುಮಕೂರಿನಲ್ಲಿ ಅಲ್ಪಸಂಖ್ಯಾತರ ಬೃಹತ್ ಶಕ್ತಿ ಪ್ರದರ್ಶನವನ್ನು ನಡೆಸಿತು. ಸಮಾವೇಶಕ್ಕೆ ನಾಡಿನ ಮೂಲೆ ಮೂಲೆಗಳಿಂದ ಜನಸಾಗರ ಹರಿದುಬಂದಿತ್ತು. ನಿನ್ನೆಯಿಂದಲೇ ಕರಾವಳಿ, ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನಿಂದ ಪಕ್ಷದ ಕಾರ್ಯಕರ್ತರು ತಂಡೋಪ ತಂಡವಾಗಿ ತುಮಕೂರಿಗೆ ಆಗಮಿಸಿದ್ದರು. ಅಲ್ಪಸಂಖ್ಯಾತರ ಸಮಾವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಜನಸಾಗರವೇ ಹರಿದುಬಂದು ಜೆಡಿಎಸ್‍ನ ಭದ್ರಕೋಟೆಯಾದ ತುಮಕೂರಿನಲ್ಲಿ ಶಕ್ತಿಪ್ರದರ್ಶನ ನಡೆಸಲಾಯಿತು.
ತುಮಕೂರಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಆಯೋಜಿಸಿದ್ದ ಸಮಾವೇಶದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲ , ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಒಲವು ರಾಜ್ಯದ ಜನರಲ್ಲಿ ಕಂಡುಬರುತ್ತಿದೆ. ಹೀಗಾಗಿ ಜೆಡಿಎಸ್‍ಗೆ ಅಧಿಕಾರ ಸಿಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗುವುದು ಶತಸಿದ್ದ ಎಂದು ಪಕ್ಷದ ನಾಯಕರು ಪ್ರತಿಪಾದಿಸಿದರು.
Comments