ಬಂಡಾಯ ಶಾಸಕರ ವಿರುದ್ಧ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗೆ ಮುಂದಾದ ಜೆಡಿಎಸ್

ಮುಂಬರುವ ವಿಧಾನಸಭಾ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ತೀವ್ರ ಕಸರತ್ತು ನಡೆಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿಯವರು ಇನ್ನೊಂದು ವಾರದಲ್ಲಿ 150ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅರ್ಹ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ಹಾಲಿ ಶಾಸಕರು ಮುಂಬರುವ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಮುಖಂಡರ ಜೊತೆ ಸರಣಿ ಸಭೆಗಳನ್ನು ನಡೆಸಿರುವ ಕುಮಾರಸ್ವಾಮಿಯವರು, `ಗ್ರೌಂಡ್ ರಿಯಾಲಿಟಿ’ ತಿಳಿಯಲು ಮುಂದಾಗಿದ್ದಾರೆ. ಮಾತ್ರವಲ್ಲದೆ ಇನ್ನೊಂದು ವಾರದಲ್ಲಿ `ಗೆಲ್ಲುವ ಕುದುರೆ’ಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
ಈ ನಿಟ್ಟಿನಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು, ಕ್ಷೇತ್ರದ ಉಸ್ತುವಾರಿಗಳ ಸಭೆ ನಡೆಸಿ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ಈಗಾಗಲೇ ವಿವಿಧ ಜಿಲ್ಲೆಗಳ ಮುಖಂಡರು ಮತ್ತು ಆಕಾಂಕ್ಷಿಗಳ ಸಭೆ ನಡೆಸಿದ್ದಾರೆ. ಇದರ ಮುಂದುವರೆದ ಭಾಗವಾಗಿ ಇಂದು ಬೆಂಗಳೂರಿನ 13 ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಟಿಕೆಟ್ ಆಕಾಂಕ್ಷಿಗಳು, ಹಾಲಿ ಶಾಸಕರ ಸಭೆ ಕರೆದು ಚರ್ಚೆ ನಡೆಸುತ್ತಿದ್ದಾರೆ.ತಮಗೆ ಸೆಡ್ಡು ಹೊಡೆದು ಕಾಂಗ್ರೆಸ್‌ನತ್ತ ಮುಖ ಮಾಡಿರುವ ಚಾಮರಾಜಪೇಟೆ, ಪುಲಿಕೇಶಿ ನಗರ ಕ್ಷೇತ್ರಗಳಿಗೆ ಪರ್ಯಾಯ ಹಾಗೂ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದ್ದಾರೆ.ಪಕ್ಷದ ಹಾಲಿ 33 ಶಾಸಕರಿಗೆ ಪಕ್ಷದ ಟಿಕೆಟ್ ನೀಡುವುದು ಖಾತರಿಯಾಗಿದ್ದು, ಯಾವುದೇ ವಿವಾದವಿಲ್ಲದ ಕ್ಷೇತ್ರಗಳಲ್ಲಿ `ಗೆಲ್ಲುವ ಮುಖಗಳಿಗೆ’ ಚುನಾವಣೆ ಸಿದ್ಧತೆ ಮಾಡಿಕೊಳ್ಳುವಂತೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
Comments