ಶ್ರೀರಾಮನ ಅಸ್ತಿತ್ವದ ಬಗ್ಗೆ ಪುರಾವೆ ಇಲ್ಲ ಅಂದಿದ್ದ ದ್ವಾರಕಾನಾಥ್ ವಿರುದ್ಧ ದೂರು

ಹಿಂದುಗಳ ಆರಾಧ್ಯ ದೈವ ಶ್ರೀರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರಗತಿಪರ ಚಿಂತಕರಾದ ಸಿ.ಎಸ್ ದ್ವಾರಕಾನಾಥ್ ವಿರುದ್ಧ ದೂರು ದಾಖಲಾಗಿದೆ. ಮಂಗಳೂರಿನ ಪುರಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಾಬರಿ ಮಸೀದಿ ಧ್ವಂಸ ಕುರಿತ ವಿಚಾರ ಸಂಕಿರಣದಲ್ಲಿ ದ್ವಾರಕಾನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅವರು ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದಲ್ಲದೆ, ರಾಮ ಬದುಕಿದ್ದ ಎಂಬುದಕ್ಕೆ ಪುರಾವೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಹಿಂದು ಮುಖಂಡ ಗಣೇಶ್ ಶೆಟ್ಟಿ ಕಲ್ಲಡ್ಕ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದ್ವಾರಕಾನಾಥ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು, "ಶ್ರೀರಾಮನ ಬಗ್ಗೆ ಜನರಿಗೆ ನಂಬಿಕೆ ಇದೆ. ಜನರ ನಂಬಿಕೆ ಅಲುಗಾಡಿಸುವ ಯತ್ನ ಮಾಡಬೇಡಿ. ಅನ್ಯ ಧರ್ಮೀಯರ ಬಗ್ಗೆ ಹೀಗೆ ಹೇಳುತ್ತೀರಾ? ಇಂತಹ ಹೇಳಿಕೆಗಳು ಅನಗತ್ಯ" ಎಂದು ತಿಳಿಸಿದ್ದಾರೆ.
Comments