ಪೇಜಾವರ ಶ್ರೀ ಹೇಳಿಕೆಗೆ ತಿರುಗೇಟು ನೀಡಿದ ಎಚ್ ಡಿಕೆ
ಕೇವಲ ಹೇಳಿಕೆಗಳನ್ನ ನೀಡಿ ಬಾಯಿ ಚಪಲ ತೀರಿಸಿಕೊಳ್ಳುಬಹುದು. ಆದರೆ ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪೇಜಾವರ ಶ್ರೀ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಸಭೆಗಳು ರಾಜಕೀಯ ಪ್ರೇರಿತ. ಉಡುಪಿಯಲ್ಲಿ ಬಿಜೆಪಿ ಸಭೆ ನಡೆಸಿದೆ. ಸಾಹಿತ್ಯದ ಹೆಸರಿನಲ್ಲಿ ಕಾಂಗ್ರೆಸ್ ಸಮ್ಮೇಳನ ನಡೆಸಿದ್ದಾರೆ ಎಂದರು.ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಸಿದ್ದರಾಮಯ್ಯ ಜಿಲ್ಲೆಯ ರಾಜಕಾರಣಕ್ಕೆ ಅನುಕೂಲ ಮಾಡಿಕೊಳ್ಳಲು 8 ಕೋಟಿ ಹಣ ವ್ಯಯಿಸಿದ್ದಾರೆ. ಈ ಹಿಂದೆ ನಡೆದ ಯಾವುದೇ ಸಾಹಿತ್ಯ ಸಮ್ಮೇಳನಕ್ಕೆ ಇಷ್ಟು ಹಣ ಕೊಟ್ಟ ನಿದರ್ಶನಗಳು ನನ್ನ ಗಮನಕ್ಕೆ ಬಂದಿಲ್ಲವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.
ಉತ್ತರ ಪ್ರದೇಶದಲ್ಲಿ ರಾಮಮಂದಿರ ಕಟ್ಟಬೇಕು. ಆದ್ರೆ ಕರ್ನಾಟಕದಲ್ಲಿ ಸಭೆ ಮಾಡುವುದು ಎಷ್ಟು ಸರಿ ಎಂದ ಅವರು ಅಯೋಧ್ಯೆಯಲ್ಲಿ ಧರ್ಮ ಸಂಸತ್ ಸಭೆ ನಡೆಯಬೇಕಾಗಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು. ಅಲ್ಲದೆ ಚುನಾವಣೆ ಹತ್ತಿರ ಇರುವುದರಿಂದ ರಾಮನ ಹೆಸರು ಹೇಳಿಕೊಂಡು ಬಿಜೆಪಿಯವರು ಸಭೆ ನಡೆಸಿದ್ದಾರೆ ಎಂದರು. ನಾವು ಮಾಗಡಿ ಹಾಗೂ ನಾಗಮಂಗಲದಲ್ಲಿ ಮಾತ್ರ ಸಮಾವೇಶ ಮಾಡುವುದಿಲ್ಲ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಜೆಡಿಎಸ್ ಸಮಾವೇಶಗಳನ್ನ ಮಾಡುತ್ತೇವೆ. ಅಲ್ಲದೆ ನಾಗಮಂಗಲ ಹಾಗೂ ಮಾಗಡಿ ಕ್ಷೇತ್ರಕ್ಕೆ ಅಷ್ಟು ಮಹತ್ವ ಕೊಡುವ ಅಗತ್ಯವಿಲ್ಲ, ಅಭ್ಯರ್ಥಿಗಳ ಪಟ್ಟಿಯನ್ನ ಆದಷ್ಟು ಬೇಗ ಬಿಡುಗಡೆ ಮಾಡುವುದಾಗಿ ಎಂದು ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.
Comments