ಬಿಎಸ್‌ವೈಗೆ ಟಾಂಗ್ ಕೊಟ್ಟ ಎಚ್ ಡಿಕೆ
ನಗರದ ಟೌನ್ ಹಾಲ್‌ನಲ್ಲಿ ನಡೆದ ಸಂವಾದದಲ್ಲಿ ಮೂವತ್ತಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿದ್ದವು. ದಲಿತರ ಸಮಸ್ಯೆಗಳ ಬಗ್ಗೆ, ಜಾರಿಗೆ ತರಬೇಕಿರುವ ವಿಚಾರಗಳ ಬಗ್ಗೆ ಸಂವಾದದಲ್ಲಿ ಚರ್ಚೆ ಮಾಡಲಾಯಿತು.ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಖಾಸಗಿ ವಲಯದಲ್ಲಿ ಮೀಸಲಾತಿ ತರಲು ನನ್ನ ಸಂಪೂರ್ಣ ಬೆಂಬಲ ಇದೆ. ಈ ಬಗ್ಗೆ ಲೋಕಸಭೆಯಲ್ಲಿ ಒಂದು ಮಸೂದೆ ತರಬೇಕು ಅನ್ನೋದು ನನ್ನ ಆಶಯ. ನನ್ನ ಗ್ರಾಮ ವಾಸ್ತವ್ಯದ ಬಗ್ಗೆ ಹಲವರು ಟೀಕೆ ಮಾಡುತ್ತಾರೆ. ದಲಿತರ ಮನೆಯಲ್ಲೇ ನಾನು ವಾಸ್ತವ್ಯ ಮಾಡಿದ್ದೇನೆ. ಅವರು ತಯಾರಿಸಿದ ಆಹಾರವನ್ನೇ ನಾನು ಸೇವಿಸಿದ್ದೇನೆ ಎಂದು ಪರೋಕ್ಷವಾಗಿ ಬಿಎಸ್‌ವೈಗೆ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು.
ನೀವು ನನ್ನ ಮೇಲೆ ವಿಶ್ವಾಸ ಇಡಿ. ನಾನು ರಾಜಕೀಯ ಕುಟುಂಬದಿಂದ ಬಂದಿದ್ದೇನೆ. 70 ವರ್ಷಗಳ ಕಾಲ ನೀವು ಎಲ್ಲಾ ಸರ್ಕಾರಗಳನ್ನು ನೋಡಿದ್ದೀರಿ. ಈ ಬಾರಿ ನನಗೆ ಅವಕಾಶ ಸಿಕ್ಕರೆ ನಾನು ಎಲ್ಲ ಸರಿಪಡಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.ನಮ್ಮ ಸರ್ಕಾರ ಬಂದರೆ ಮೂರು ತಿಂಗಳಲ್ಲಿ ಎಲ್ಲ ಸರಿ ಮಾಡುತ್ತೇನೆ. ಬಡ್ತಿ ಮೀಸಲಾತಿ ಮಸೂದೆಯನ್ನು ನಾನು ಯಾವತ್ತೂ ವಿರೋಧ ಮಾಡಿಲ್ಲ. ಸಿದ್ದರಾಮಯ್ಯ ಸರ್ಕಾರ ಈ ಕಾಯ್ದೆ ಜಾರಿ ತರುವಲ್ಲಿ ವಿಫಲವಾದರೆ ನಾವು ಅಧಿಕಾರಕ್ಕೆ ಬಂದಾಗ ಮೊದಲ ಅಧಿವೇಶನದಲ್ಲಿಯೇ ಈ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಜ್ಯೋತಿಷ್ಯದ ಮೇಲೆ ನನಗೆ ನಂಬಿಕೆ ಇಲ್ಲ. ಟಿವಿ ಜ್ಯೋತಿಷ್ಯಗಳಲ್ಲೂ ಕೂಡ ನಾನೇ ಮುಂದಿನ ಸಿಎಂ ಆಗುತ್ತೇನೆ ಎಂದು ಹೇಳಲಾಗಿದೆ. ನಾನು ಮೂಲತಃ ರಾಜಕಾರಣಿಯಲ್ಲ, ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದೆ. ನನ್ನ ವೃತ್ತಿನೇ ಬೇರೆಯಿತ್ತು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಾನು 10-15 ವರ್ಷಗಳ ಕಾಲ ನನಗೆ ಅವಕಾಶ ಕೊಡಿ ಅಂತಿಲ್ಲ. 5 ವರ್ಷ ಕೊಡಿ ದಲಿತ ಸಂಘಟನೆಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಸಂವಾದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಸತಿ ಹೀನರಿಗೆ ಪ್ರತ್ಯೇಕ ಬಡಾವಣೆ ಮಾಡುವ ಆಸೆ ಇದೆ. ದಲಿತ ಕೇರಿ, ಮತ್ತೊಂದು ಜಾತಿಯ ಕೇರಿ ಅಂತಾ ಇರಬಾರದು. ಕೇವಲ ವಸತಿ ರಹಿತರಿಗೆ ಮನೆ ಕಲ್ಪಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದರು.ಎಲ್ಲಾ ಬಡವರಿಗೆ ಮತ್ತು ಹಿಂದುಳಿದ ವರ್ಗಕ್ಕೆ ವಿಶೇಷ ಕಾರ್ಯಕ್ರಮ ನೀಡುವುದು ನನ್ನ ಆಶಯ ಎಂದು ತಿಳಿಸಿದರು.
Comments