ನೈಸ್ ಅಕ್ರಮಕ್ಕೆ ಉತ್ತರ ಕೊಡದಿದ್ದರೆ ಜೆಡಿಎಸ್ ನಿಂದ ಧರಣಿ ನಡೆಸುತ್ತೇವೆ

ನೈಸ್ ಸಂಸ್ಥೆಯ ಅಕ್ರಮಗಳಿಗೆ ಸಂಬಂಧಿಸಿದ ಸದನ ಸಮಿತಿ ವರದಿ ಬಗ್ಗೆ ಸರ್ಕಾರದ ತೀರ್ಮಾನ ಹೇಳುವಂತೆ ಒತ್ತಾಯಿಸಿ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ನಡೆಯಿತು.
ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಎಚ್.ಡಿ.ರೇವಣ್ಣ, ಸದನದಲ್ಲಿ ಉತ್ತರ ಕೊಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಕಾಣುತ್ತಿಲ್ಲ. ನೈಸ್ ಸಂಸ್ಥೆ ವಿಚಾರದಲ್ಲಿ 30 ಸಾವಿರ ಕೋಟಿ ರೂ.ಅವ್ಯವಹಾರ ನಡೆದಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಸದನ ಸಮಿತಿ ವರದಿ ಕೊಟ್ಟು ವರ್ಷ ಆಗಿದೆ. ಹಾಗಾಗಿ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿ, ತೀರ್ಮಾನ ಹೇಳಬೇಕೆಂದು ಪಟ್ಟು ಹಿಡಿದರು. ಗುರುವಾರವೇ ಉತ್ತರ ಕೊಡುವುದಾಗಿ ಯಾರು ಹೇಳಿದ್ದರು ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು.ಸರ್ಕಾರವೇ ಹೇಳಿತ್ತು ಎಂದ ರೇವಣ್ಣ , ಶಿವಲಿಂಗೇಗೌಡ, ಈಗ ಉತ್ತರ ಕೊಡಬೇಕು. ಇಲ್ಲದಿದ್ದರೆ ಧರಣಿ ನಡೆಸಬೇಕಾಗುತ್ತದೆ ಎಂದು ಸಭಾಧ್ಯಕ್ಷರ ಪೀಠದ ಎದುರು ಧಾವಿಸಿ ಧರಣಿ ಆರಂಭಿಸಿದರು. ಶುಕ್ರವಾರ ಉತ್ತರ ಕೊಡುವುದಾಗಿ ಸಚಿವ ಎಚ್.ಕೆ.ಪಾಟೀಲ್ ಭರವಸೆ ನೀಡಿದ ಬಳಿಕ ಧರಣಿ ವಾಪಸ್ ಪಡೆದರು.
Comments