ವಿದ್ಯುತ್ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ.ರೇವಣ್ಣ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಸರ್ಕಾರದಲ್ಲಿ ನಡೆದಿರುವ ವಿದ್ಯುತ್ ಖರೀದಿ ಹಗರಣದ ಬಗ್ಗೆ ಹಾಲಿ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸಬೇಕೆಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ. ಇಂಧನ ಇಲಾಖೆ ವಿದ್ಯುತ್ ಖರೀದಿ ಹಗರಣ ಸಂಬಂಧ ನಿನ್ನೆ ಸದನ ಸಮಿತಿ ವರದಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಅಷ್ಟೇ ಅಲ್ಲ, ಪ್ರಸ್ತುತ ಅವಧಿಯಲ್ಲಿ ನಡೆದಿರುವ ಇಂಧನ ಇಲಾಖೆಯಲ್ಲಿನ ವಿದ್ಯುತ್ ಖರೀದಿ ಬಗ್ಗೆಯೂ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ನಾನು ಇಂಧನ ಇಲಾಖೆ ಸಚಿವನಾಗಿದ್ದಾಗ 73 ಕೋಟಿ ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ನನಗೂ ಆ ವರದಿಯಲ್ಲಿರುವ ಅಂಶಗಳಿಗೂ ಯಾವುದೇ ಸಂಬಂಧವಿಲ್ಲ. ವಿದ್ಯುತ್ ಖರೀದಿಯನ್ನು ಕೆಪಿಸಿಎಲ್ ವ್ಯವಸ್ಥಾಪಕರು ನೋಡಿಕೊಳ್ಳುತ್ತಾರೆ ಎಂದು ತಮ್ಮ ಮೇಲೆ ಇರುವ ಆರೋಪವನ್ನು ರೇವಣ್ಣ ಸಾರಾಸಗಟಾಗಿ ತಳ್ಳಿಹಾಕಿದರು. ನಾನು ಸಚಿವನಾಗಿದ್ದಾಗ ಒಂದು ಬಾರಿಯೂ ವಿದ್ಯುತ್ ದರ ಹೆಚ್ಚಿಸಿರಲಿಲ್ಲ. ಅಧಿಕಾರಿಗಳು ಸಾಕಷ್ಟು ಮಾಹಿತಿ ಮುಚ್ಚಿಹಾಕಿದ್ದಾರೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.
Comments