ಮಾನವೀಯ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ದೇವೇಗೌಡರು
ಕೆಂಗೇರಿಯ ಬಿಜಿಎಸ್ ಹೆಲ್ತ್ ಸಿಟಿಯಲ್ಲಿ ಏರ್ಪಡಿಸಿದ್ದ ಸಂಸ್ಥಾಪಕ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ-2017 ಕಾರ್ಯಕ್ರಮವನ್ನು ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಬೇಕು. ನಾವೆಲ್ಲ ಐಕ್ಯತೆಯಿಂದ ಬಾಳಬೇಕು. ಆ ರೀತಿಯ ಸಂಸ್ಕೃತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದು ಹೇಳಿದರು.
ವಿವಿಧ ಧರ್ಮ, ಸಂಸ್ಕೃತಿಯನ್ನೊಳಗೊಂಡ ದೇಶ ನಮ್ಮದು. ಎಲ್ಲ ಧರ್ಮಗಳೂ ಸಂಸ್ಕೃತಿಯನ್ನು ಗೌರವಿಸಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲಹೆ ಮಾಡಿದ್ದಾರೆ.ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿಬೇಕು. ಶ್ರಮ ವಹಿಸಿ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಅವರ ಅಕ್ಷರ ಬದುಕಿಗೆ ಉತ್ತಮ ಅಡಿಪಾಯ ಹಾಕಬೇಕೆಂಬ ಉದ್ದೇಶದಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಹಳ್ಳಿ ಹಳ್ಳಿಗೆ ತೆರಳಿ ಶ್ರಮ ವಹಿಸಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಅವು ಉತ್ತಮವಾಗಿ ಬೆಳೆದು ನೂರಾರು ಮಂದಿಗೆ ಅಕ್ಷರ ದಾಸೋಹ ನೀಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು 10 ತಿಂಗಳು, 10 ದಿನ ಪ್ರಧಾನಮಂತ್ರಿಯಾಗಿದ್ದೆ. ಆ ಸಮಯದಲ್ಲಿ ಒಂದೇ ಒಂದು ರೈತರ ಆತ್ಮಹತ್ಯೆ ಆಗಿರಲಿಲ್ಲ. ಕೋಮು ಗಲಭೆ ನಡೆದಿರಲಿಲ್ಲ. ಇದು ನನ್ನ ಅವಧಿಯ ಹೆಗ್ಗುರುತು ಎಂದು ಹೇಳಿದರು.ಜನ ದೇವೇಗೌಡ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಹೊರವರ್ತುಲ ರಸ್ತೆ, ಮೇಲ್ಸೇತುವೆ, ನೀರಾವರಿ ಯೋಜನೆ ಇದೆಲ್ಲ ನನ್ನ ಅವಧಿಯಲ್ಲೇ ಆದದ್ದು. ಉಪನಗರಗಳನ್ನು ನಿರ್ಮಿಸಬೇಕೆಂಬುದು ಮತ್ತು ಸುತ್ತಮುತ್ತಲ ನಗರಗಳು ಅಭಿವೃದ್ಧಿಯಾಗಬೇಕೆಂಬುದು ನನ್ನ ಕನಸಾಗಿತ್ತು ಎಂದು ತಿಳಿಸಿದರು.ಗ್ರಾಮೀಣ ಪ್ರದೇಶದಿಂದ ಬಂದ ಸಾಮಾನ್ಯ ವ್ಯಕ್ತಿ ಪ್ರಧಾನಿಯಾದೆ ಎಂಬ ಕಾರಣಕ್ಕೆ ಮಾಧ್ಯಮಗಳು ಕೂಡ ನನ್ನ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಲಿಲ್ಲ ಎಂದು ಇದೇ ಸಂದರ್ಭದಲ್ಲಿ ಗೌಡರು ಬೇಸರ ವ್ಯಕ್ತಪಡಿಸಿದರು. ಬಾಲಗಂಗಾಧರ ಶ್ರೀಗಳ ಕನಸು ನನಸಾಗಬೇಕಾದರೆ ಶಿಸ್ತು, ಗುರಿ ಇಟ್ಟುಕೊಂಡು ವಿದ್ಯಾರ್ಥಿಗಳು ಮುಂದೆ ಬರಬೇಕು. ಇಲ್ಲಿನ ಶಿಕ್ಷಣ ಸಂಸ್ಥೆಯ ಬೆಳವಣಿಗೆ ನೋಡಿದರೆ ಶ್ರೀಗಳ ಧ್ಯೇಯೋದ್ದೇಶ ಈಡೇರಿದಂತೆ ಭಾಸವಾಗುತ್ತಿದೆ ಎಂದು ಅವರು ಶ್ಲಾಘಿಸಿದರು.
Comments