ಭವಿಷ್ಯದ ಬೇಡಿಕೆ ಈಡೇರಿಸುವ ಸಲುವಾಗಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ

ತಾಲೂಕಿನ ಭವಿಷ್ಯದ ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿದ ಪರಿಣಾಮ ಜನಸಾಮಾನ್ಯರು, ರೈತರು, ವಿದ್ಯಾರ್ಥಿಗಳು, ದೀನ, ದಲಿತರು, ಅಲ್ಪಸಂಖ್ಯಾತರು, ಬಡವರ ಸಮಸ್ಯೆಗಳಿಗೆ ಸ್ಪಂದಿಸುವವರು ಇಲ್ಲದಂತಾಗಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ನಿರ್ಮಿತಿ ಕೇಂದ್ರ ಹಾಗೂ ಭೂ ಸೇನಾ ನಿಗಮದ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಮಿಷನ್ ಆಧಾರಿತ ಕಾಮಗಾರಿಗಳಾಗಿವೆ. ಕಳಪೆ ಕಾಮಗಾರಿಗಳು ಜನಸಾಮಾನ್ಯರ ಕಣ್ಣಿಗೆ ರಾಚುವಂತೆ ನಡೆಯುತ್ತಿದೆ. ಸರ್ಕಾರಿ ಹಣ ಲೂಟಿಯಾಗುತ್ತಿದ್ದರೂ ಸಂಬಂಧಪಟ್ಟವರು ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಭೂ ಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರದವರು ನಿರ್ಮಿಸುತ್ತಿರುವ ಕಾಮಗಾರಿಗಳ ತನಿಖೆಯಾಗಬೇಕು.
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ ಪ್ರತಿಟನ್ ಕಬ್ಬಿಗೆ 3,000 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. ಕಲ್ಲೂರ ಬ್ರಿಡ್ಜ್ ಕಂ ಬ್ಯಾರೇಜ್ ದುರಸ್ತಿ ಮಾಡುವುದರ ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಡಿ. 31ರ ವರೆಗೆ ವಾರಾಬಂದಿ ಪದ್ಧತಿ ಕೈಬಿಡಬೇಕು. ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ಕೊಡಬೇಕು. ತೊಗರಿ ಖರೀದಿ ಕೆಂದ್ರ ಪ್ರಾರಂಭಿಸಿ ದರ ನಿಗದಿ ಮಾಡಬೇಕು. ಹಿಪ್ಪರಗಾ ಎಸ್.ಎನ್. ಗ್ರಾಮದ ಬಳಿ ನಡೆಯುತ್ತಿರುವ ಸೋಲಾರ್ ಕಂಪನಿಯವರಿಂದ ರೈತರಿಗೆ ನ್ಯಾಯ ಕೊಡಿಸಬೇಕು ಎಂಬ ಇತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿದರು.
ಇದಕ್ಕೂ ಮುನ್ನ ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್‌ನಿಂದ ತಹಶೀಲ್ದಾರ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ತಹಶೀಲ್ದಾರ ಯಲ್ಲಪ್ಪ ಸುಬೇದಾರ ಅವರಿಗೆ ಮನವಿ ಪತ್ರ ಸಲ್ಲಿಸಿ ಅರ್ನಿಷ್ಟವಾದಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
Comments